Rohit Sharma: ಮತ್ತೆ ಮುಗ್ಗರಿಸಿದ ರೋಹಿತ್ ಶರ್ಮಾ: ನಾಯಕನೇ ಈಗ ದೊಡ್ಡ ಚಿಂತೆ
T20 World Cup 2022: ಟೀಮ್ ಇಂಡಿಯಾ ಬೌಲಿಂಗ್ ವಿಭಾಗವು ಹೇಳಿಕೊಳ್ಳುವಂತಹ ಬಲಿಷ್ಠವಾಗಿಲ್ಲ ಎಂಬುದು ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್, ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಸರಣಿಗಳ ಮೂಲಕ ನಿರೂಪಿತವಾಗಿದೆ.
Updated on: Oct 10, 2022 | 1:25 PM

ಟಿ20 ವಿಶ್ವಕಪ್ ಗೆಲ್ಲಬೇಕಾದರೆ ಟೀಮ್ ಇಂಡಿಯಾ ಅತ್ಯುತ್ತಮ ಆರಂಭ ಪಡೆಯಲೇಬೇಕು. ಅಷ್ಟೇ ಅಲ್ಲದೆ ದೊಡ್ಡ ಮೊತ್ತದತ್ತ ಮುಖ ಮಾಡಬೇಕಾಗುತ್ತದೆ. ಏಕೆಂದರೆ ಟೀಮ್ ಇಂಡಿಯಾ ಬೌಲಿಂಗ್ ವಿಭಾಗವು ಹೇಳಿಕೊಳ್ಳುವಂತಹ ಬಲಿಷ್ಠವಾಗಿಲ್ಲ ಎಂಬುದು ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್, ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಸರಣಿಗಳ ಮೂಲಕ ನಿರೂಪಿತವಾಗಿದೆ.

ಆದರೆ ಮತ್ತೊಂದೆಡೆ ಟೀಮ್ ಇಂಡಿಯಾ ಅತ್ಯುತ್ತಮ ಆರಂಭ ಪಡೆಯುವಲ್ಲಿಯೂ ವಿಫಲವಾಗುತ್ತಿದೆ. ಅದರಲ್ಲೂ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ನಾಯಕ ರೋಹಿತ್ ಶರ್ಮಾ ಬೇಗನೆ ಔಟ್ ಆಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಈ ಕಳಪೆ ಫಾರ್ಮ್ ಇದೀಗ ಆಸ್ಟ್ರೇಲಿಯಾದಲ್ಲೂ ಮುಂದುವರೆದಿದೆ. ಟಿ20 ವಿಶ್ವಕಪ್ಗೂ ಮುನ್ನ ನಡೆದ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 3 ರನ್ ಗಳಿಸಿ ಔಟಾದರು. ಜೇಸನ್ ಬೆಹ್ರೆನ್‌ಡಾರ್ಫ್ ಎಸೆತದಲ್ಲಿ ಹಿಟ್ಮ್ಯಾನ್ ವಿಕೆಟ್ ಒಪ್ಪಿಸಿ ಹೊರನಡೆದರು. ಟೀಮ್ ಇಂಡಿಯಾ ನಾಯಕ ಬೇಗನೆ ಔಟ್ ಆಗುತ್ತಿರುವುದೇ ಈಗ ಹೊಸ ಚಿಂತೆಯನ್ನು ಹುಟ್ಟುಹಾಕಿದೆ.

ಏಕೆಂದರೆ ರೋಹಿತ್ ಶರ್ಮಾ ತುಂಬಾ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಅವರು 3 ಪಂದ್ಯಗಳಲ್ಲಿ ಕೇವಲ 43 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅದರಲ್ಲಿ ಎರಡು ಪಂದ್ಯಗಳಲ್ಲಿ ಖಾತೆ ತೆರೆದಿರಲಿಲ್ಲ. ಅಂದರೆ ಶೂನ್ಯಕ್ಕೆ ಔಟಾಗಿದ್ದರು. ಇದೀಗ ಮತ್ತೊಮ್ಮೆ ಒಂದಂಕಿ ಮೊತ್ತಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

ಹಾಗೆಯೇ ಕಳೆದ 11 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟ್‌ನಿಂದ ಕೇವಲ ಒಂದು ಅರ್ಧಶತಕ ಮಾತ್ರ ಮೂಡಿ ಬಂದಿದೆ. ಇನ್ನು ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ದ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದರು.

ಅಷ್ಟೇ ಅಲ್ಲದೆ ಈ ವರ್ಷ ಟಿ20 ಕ್ರಿಕೆಟ್ನಲ್ಲಿ 23 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಕಲೆಹಾಕಿರುವುದು ಕೇವಲ 540 ರನ್ಗಳು ಮಾತ್ರ. ಅಂದರೆ ಬ್ಯಾಟಿಂಗ್ ಸರಾಸರಿ ಕೇವಲ 25.71 ಇದೆಯಷ್ಟೇ. ಈ ವೇಳೆ ಅವರ ಬ್ಯಾಟ್‌ನಿಂದ ಮೂಡಿಬಂದಿರುವುದು ಕೇವಲ 2 ಅರ್ಧಶತಕಗಳು ಮಾತ್ರ. ಇದೀಗ ಅಭ್ಯಾಸ ಪಂದ್ಯದಲ್ಲೂ ರೋಹಿತ್ ಶರ್ಮಾ ಮುಗ್ಗರಿಸುವ ಮೂಲಕ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದ್ದಾರೆ.
