
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.

ಬುಮ್ರಾ ಅಲಭ್ಯತೆ ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಆಘಾತವನ್ನುಂಟು ಮಾಡಿದೆ. ಈ ಹಿನ್ನಡೆಯ ನಂತರ, ಈಗ ಅವರ ಸ್ಥಾನಕ್ಕೆ ತಂಡದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ಮೊಹಮ್ಮದ್ ಶಮಿ ಇರುತ್ತಾರಾ ಅಥವಾ ದೀಪಕ್ ಚಹಾರ್ ಆಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಆದರೆ ಇದೆಲ್ಲದಕ್ಕೂ ಮಿಗಿಲಾಗ ಟೀಮ್ ಮ್ಯಾನೇಜ್ಮೆಂಟ್ ಬೇರೆಯವರಿಗೆ ಅವಕಾಶ ನೀಡಿದ್ದರೂ ನೀಡಬಹುದು.

ಜಸ್ಪ್ರೀತ್ ಬುಮ್ರಾ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ವೈದ್ಯಕೀಯ ತಂಡ ತಪಾಸಣೆ ನಡೆಸಿದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಮೊದಲ ಟಿ20ಯಿಂದ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

ಜಸ್ಪ್ರೀತ್ ಬುಮ್ರಾ ಅವರ ಬೆನ್ನು ನೋವು ಟೀಮ್ ಇಂಡಿಯಾಕ್ಕೆ ಬಹಳ ಕಳವಳಕಾರಿಯಾಗಿದೆ. ಇತ್ತೀಚೆಗೆ, ದೀಪಕ್ ಹೂಡಾ ಕೂಡ ಇದೇ ರೀತಿಯ ಬೆನ್ನುನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ದಕ್ಷಿಣ ಆಫ್ರಿಕಾ ಸರಣಿಯಿಂದಲೇ ಹೊರಗಿಡಲಾಗಿದೆ.

ಮೂಲಗಳ ಪ್ರಕಾರ ಇಂಜುರಿಗೊಳಗಾಗಿರುವ ಬುಮ್ರಾಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಮಾಡದಿದ್ದರೂ ಅವರು ಅದರಿಂದ ಚೇತರಿಸಿಕೊಳ್ಳಲು 4 ರಿಂದ 6 ತಿಂಗಳುಗಳು ಬೇಕಾಗುತ್ತದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಗುಳಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Published On - 7:38 pm, Wed, 28 September 22