
ಭಾರತ-ದಕ್ಷಿಣ ಆಫ್ರಿಕಾ ನಡುವಣ ಸರಣಿ ಇದೇ ತಿಂಗಳ 26 ರಿಂದ ಶುರುವಾಗಲಿದೆ. ಆದರೆ ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಅಭ್ಯಾಸದಲ್ಲಿ ನಿರತರಾಗಿದ್ದ ಹಿಟ್ಮ್ಯಾನ್ ಗಾಯಗೊಂಡಿದ್ದು, ಹೀಗಾಗಿ ಅವರು ಟೆಸ್ಟ್ ಸರಣಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ದಕ್ಷಿಣ ಆಫ್ರಿಕಾ ಸರಣಿಗಾಗಿ ಟೀಮ್ ಇಂಡಿಯಾ ಡಿಸೆಂಬರ್ 16 ರಂದು ತೆರಳಲಿದ್ದು, ಇದೀಗ ಸರಣಿಗಾಗಿ ತೆರಳುವ ಸಿದ್ದತೆಯ ಬೆನ್ನಲ್ಲೇ ರೋಹಿತ್ ಶರ್ಮಾ ಗಾಯಗೊಂಡಿರುವುದು ಭಾರತ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಅಭ್ಯಾಸದ ವೇಳೆ ಥ್ರೋ ಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅವರು ಎಸೆದ ಬಾಲ್ ನೇರವಾಗಿ ರೋಹಿತ್ ಶರ್ಮಾ ಅವರ ಕೈಗೆ ತಾಗಿದೆ. ತೀವ್ರ ನೋವಿನ ಕಾರಣ ಆ ಬಳಿಕ ಹಿಟ್ಮ್ಯಾನ್ ಅಭ್ಯಾಸ ನಡೆಸಿಲ್ಲ ಎಂದು ತಿಳಿದು ಬಂದಿದೆ.

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲು ಇನ್ನೂ ಮೂರು ದಿನಗಳು ಉಳಿದಿದ್ದು, ಈ ನಡುವೆ ರೋಹಿತ್ ಶರ್ಮಾ ಚೇತರಿಸಿಕೊಳ್ಳುವ ಸಾಧ್ಯತೆಯಿದ್ದರೆ ಮಾತ್ರ ಸರಣಿಗಾಗಿ ತೆರಳಲಿದ್ದಾರೆ ಎಂದು ವರದಿಯಾಗಿದೆ.

ಇನ್ನು ಟೆಸ್ಟ್ ಸರಣಿ ಆರಂಭಕ್ಕೆ ಎರಡು ವಾರ ಬಾಕಿಯಿದ್ದು, ಹೀಗಾಗಿ ರೋಹಿತ್ ಶರ್ಮಾ ಸಂಪೂರ್ಣ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಸಂಪೂರ್ಣ ಫಿಟ್ ಆದರೆ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಬಹುದು.

ಟೀಮ್ ಇಂಡಿಯಾದಲ್ಲಿ ಆರಂಭಿಕರಾಗಿ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಇದ್ದು, ಹೀಗಾಗಿ ರೋಹಿತ್ ಶರ್ಮಾ ಅಲಭ್ಯತೆಯ ನಡುವೆಯೂ ತಂಡದ ಅನುಭವಿ ಆಟಗಾರರು ಸೆಂಚುರಿಯನ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಬಹುದು.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ: ಮೊದಲ ಟೆಸ್ಟ್ ಪಂದ್ಯ -ಡಿಸೆಂಬರ್ 26 ರಿಂದ 30 (ಸೆಂಚುರಿಯನ್, ಸಮಯ-1.30 ಗಂಟೆ), ಎರಡನೇ ಟೆಸ್ಟ್ ಜನವರಿ 3 ರಿಂದ 07 (ಜೋಹಾನ್ಸ್ ಬರ್ಗ್ , ಸಮಯ -1.30 ಗಂಟೆ), ಮೂರನೇ ಟೆಸ್ಟ್ ಜನವರಿ 11 ರಿಂದ 15 (ಕೇಪ್ ಟೌನ್, ಸಮಯ-2.00 ಗಂಟೆ)