ದಕ್ಷಿಣ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊರುಗುಳಿದಿದ್ದರು. ಹೀಗಾಗಿ ಜೋಹಾನ್ಸ್ಬರ್ಗ್ನ ವಾಂಡರರ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ನಾಯಕನಾಗಿ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದರು. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಕೆಎಲ್ ರಾಹುಲ್ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೌದು, ಕೆಎಲ್ ರಾಹುಲ್ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಗೆ ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಅಲ್ಲದೆ ಟೆಸ್ಟ್ ತಂಡದ ಉಪನಾಯಕನ ಜವಾಬ್ದಾರಿ ನೀಡಲಾಗಿತ್ತು.
ಇದೀಗ ಬೆನ್ನು ನೋವಿನಿಂದ ಬಳಲುತ್ತಿರುವ ಕೊಹ್ಲಿಯ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಭಾರತ ತಂಡದ ನಾಯಕನಾಗಿ ಚೊಚ್ಚಲ ಪಂದ್ಯವಾಡುತ್ತಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ಸೀಮಿತ ಓವರ್ಗಳ ತಂಡವನ್ನು ಮುನ್ನಡೆಸುವ ಮೊದಲೇ ಕೆಎಲ್ ರಾಹುಲ್ ಟೆಸ್ಟ್ ತಂಡದ ನಾಯಕನಾಗಿ ಪದಾಪರ್ಣೆ ಮಾಡಿದಂತಾಗಿದೆ.
ಈ ಹಿಂದೆ ಮೊಹಮ್ಮದ್ ಅಜರುದ್ದೀನ್ ಹೀಗೆ ಸೀಮಿತ ಓವರ್ಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಮೊದಲೇ ಟೆಸ್ಟ್ ತಂಡದ ನಾಯಕರಾಗಿದ್ದರು. 1990 ರಲ್ಲಿ ಅಜರ್ ಇಂತಹ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಕೆಎಲ್ ರಾಹುಲ್ ಕೂಡ ಸೀಮಿತ ಓವರ್ಗಳ ತಂಡದ ನಾಯಕನಾಗುವ ಮೊದಲೇ ಟೆಸ್ಟ್ ತಂಡದ ನಾಯಕನಾದ ವಿಶೇಷ ಗರಿಮೆಗೆ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲದೆ ಟೀಮ್ ಇಂಡಿಯಾವನ್ನು ಟೆಸ್ಟ್ನಲ್ಲಿ ಮುನ್ನಡೆಸುತ್ತಿರುವ 34ನೇ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ. ಜೊತೆಗೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ ನಾಲ್ಕನೇ ಕನ್ನಡಿಗ ಎಂಬ ದಾಖಲೆಯನ್ನೂ ಕೂಡ ಬರೆದಿದ್ದಾರೆ. ಈ ಹಿಂದೆ ಗುಂಡಪ್ಪ ವಿಶ್ವನಾಥ್ (1980), ರಾಹುಲ್ ದ್ರಾವಿಡ್ (2003-2007) ಹಾಗೂ ಅನಿಲ್ ಕುಂಬ್ಳೆ (2007-08) ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕನ್ನಡಿಗರೆನಿಸಿಕೊಂಡಿದ್ದರು. ಇದೀಗ ವಿಶೇಷ ಸಾಧಕರ ಪಟ್ಟಿಗೆ ಕೆಎಲ್ ರಾಹುಲ್ ಕೂಡ ಸೇರ್ಪಡೆಯಾಗಿದ್ದಾರೆ.