Updated on: Dec 24, 2023 | 8:16 PM
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಮತ್ತು ಟಿ20 ಸರಣಿ ಮುಗಿದಿದ್ದು, ಇದೀಗ ಉಭಯ ತಂಡಗಳ ಕಣ್ಣು ಎರಡು ಟೆಸ್ಟ್‌ಗಳ ಸರಣಿಯತ್ತ ನೆಟ್ಟಿದೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಂದು ಸೆಂಚುರಿಯನ್ನಲ್ಲಿ ನಡೆಯಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ದೃಷ್ಟಿಯಿಂದ ಈ ಸರಣಿ ಎರಡೂ ತಂಡಗಳಿಗೂ ಮುಖ್ಯವಾಗಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ದಾಖಲೆ ಉತ್ತಮವಾಗಿರದ ಭಾರತ ಈ ಸರಣಿಯನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಟೆಸ್ಟ್ ಪ್ರದರ್ಶನ ನಿರಸವಾಗಿದ್ದು, ಇದುವರೆಗೆ ಕೇವಲ ಮೂವರು ಭಾರತೀಯ ನಾಯಕರು ಮಾತ್ರ ಇಲ್ಲಿ ಗೆಲುವು ದಾಖಲಿಸಿದ್ದಾರೆ.
ಭಾರತ ತಂಡವು ದಕ್ಷಿಣ ಆಫ್ರಿಕಾ ನೆಲದಲ್ಲಿ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಟೀಂ ಇಂಡಿಯಾ ಕೇವಲ ನಾಲ್ಕರಲ್ಲಿ ಮಾತ್ರ ಗೆದ್ದಿದೆ. 12 ಪಂದ್ಯಗಳಲ್ಲಿ ತಂಡ ಸೋಲು ಕಂಡಿದ್ದು, 7 ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ.
ಆಫ್ರಿಕಾದ ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ ಮೂವರು ಭಾರತೀಯ ನಾಯಕರು ಮಾತ್ರ ಗೆಲುವು ಸಾಧಿಸಿದ್ದಾರೆ. ಇವರಲ್ಲಿ ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಸೇರಿದ್ದಾರೆ.
ಭಾರತ ತಂಡವು 2006 ರಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಆಗ ಟೀಂ ಇಂಡಿಯಾದ ನಾಯಕ ರಾಹುಲ್ ದ್ರಾವಿಡ್ ಆಗಿದ್ದರು. ದ್ರಾವಿಡ್ ನಾಯಕತ್ವದಲ್ಲಿ ಭಾರತ 123 ರನ್‌ಗಳ ಜಯ ಸಾಧಿಸಿತ್ತು.
ಇದಾದ ನಂತರ 2010ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವನ್ನು 87 ರನ್‌ಗಳಿಂದ ಗೆದ್ದುಕೊಂಡಿತ್ತು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಆಫ್ರಿಕಾ ವಿರುದ್ಧ ಆಫ್ರಿಕಾದ ನೆಲದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದ ಏಕೈಕ ನಾಯಕ ಎನಿಸಿಕೊಂಡಿದ್ದಾರೆ. 2018ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ 63 ರನ್‌ಗಳ ಜಯ ಸಾಧಿಸಿತ್ತು. ಇದರ ನಂತರ, 2021 ರಲ್ಲಿ, ಟೆಸ್ಟ್ ಪಂದ್ಯವನ್ನು 113 ರನ್‌ಗಳಿಂದ ಗೆದ್ದುಕೊಂಡಿತು. ಕಳೆದ ಎರಡು ವರ್ಷಗಳಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಪಂದ್ಯ ಗೆಲ್ಲಲು ಕಾಯುತ್ತಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ಕೆ ಎಸ್ ಭರತ್ (ವಿಕೆಟ್ ಕೀಪರ್).
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ: ತೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂದ್ರೆ ಬರ್ಗರ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ, ಜೆರಾಲ್ಡ್ ಕೊಯೆಟ್ಜಿ, ಟೋನಿ ಡಿ ಜಾರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಪೀಟರ್ಸನ್.