- Kannada News Photo gallery Cricket photos ನಮ್ಮಿಬ್ಬರ ಜಗಳ ಮೈದಾನದಲ್ಲಿ ಮಾತ್ರ: ಕೊಹ್ಲಿ ಕುರಿತ ಪ್ರಶ್ನೆಗೆ ಗಂಭೀರ್ ಉತ್ತರ
ನಮ್ಮಿಬ್ಬರ ಜಗಳ ಮೈದಾನದಲ್ಲಿ ಮಾತ್ರ: ಕೊಹ್ಲಿ ಕುರಿತ ಪ್ರಶ್ನೆಗೆ ಗಂಭೀರ್ ಉತ್ತರ
Gautam Gambhir vs Virat Kohli: ಈ ಬಾರಿಯ ಐಪಿಎಲ್ನಲ್ಲಿ ಗೌತಮ್ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅತ್ತ ವಿರಾಟ್ ಕೊಹ್ಲಿ ಎಂದಿನಂತೆ ಆರ್ಸಿಬಿ ಪರ ಆಡಲಿದ್ದಾರೆ. ಹೀಗಾಗಿ ಆರ್ಸಿಬಿ-ಕೆಕೆಆರ್ ನಡುವಣ ಪಂದ್ಯವು ಗಂಭೀರ್-ವಿರಾಟ್ ಕಾರಣದಿಂದ ಎಲ್ಲರ ಕುತೂಹಲಕ್ಕೆ ಕಾರಣವಾಗಲಿದೆ.
Updated on: Dec 25, 2023 | 8:36 AM

ವಿರಾಟ್ ಕೊಹ್ಲಿ-ಗೌತಮ್ ಗಂಭೀರ್...ಈ ಇಬ್ಬರು ಮೈದಾನದಲ್ಲಿ ಕಾಣಿಸಿಕೊಂಡರೆ ಅಲ್ಲೊಂದು ವಿವಾದವನ್ನು ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಾರೆ. ಅಷ್ಟರಮಟ್ಟಿಗೆ ದೆಹಲಿಯ ಈ ಇಬ್ಬರು ಕ್ರಿಕೆಟಿಗರು ಮೈದಾನದಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ. ಈ ಜಿದ್ದಾಜಿದ್ದು ಗಂಭೀರ್ ಅವರ ನಿವೃತ್ತಿ ಬಳಿಕ ಕೂಡ ಮುಂದುವರೆದಿರುವುದು ವಿಶೇಷ.

ಏಕೆಂದರೆ 2013 ರಲ್ಲಿ ಕೆಕೆಆರ್-ಆರ್ಸಿಬಿ ನಡುವಣ ಪಂದ್ಯದ ವೇಳೆ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಮೈದಾನದಲ್ಲೇ ಪರಸ್ಪರ ಬೈದಾಡಿಕೊಂಡಿದ್ದರು. ಇದಾದ ಬಳಿಕ ಇಬ್ಬರು ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಡೆಯೊಂದಿಗೆ ಗಮನ ಸೆಳೆದಿದ್ದರು.

ಆದರೆ ಗೌತಮ್ ಗಂಭೀರ್ ನಿವೃತ್ತಿಯೊಂದಿಗೆ ಎಲ್ಲದಕ್ಕೂ ಫುಲ್ ಸ್ಟಾಪ್ ಬೀಳಲಿದೆ ಎಲ್ಲರೂ ಅಂದುಕೊಂಡಿದ್ದರು. ಆದರೆ 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಂಡಿದ್ದ ಗಂಭೀರ್ ಮತ್ತದೇ ವರಸೆ ತೋರಿಸಿದ್ದರು. ಈ ವರಸೆಯು ಮತ್ತೊಂದು ಹಂತಕ್ಕೆ ಹೋಗಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಮತ್ತೊಮ್ಮೆ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದರು.

ಈ ಘಟನೆ ನಡೆದು ಇದೀಗ ವರ್ಷವಾಗುತ್ತಾ ಬರುತ್ತಿದೆ. ಇದರ ನಡುವೆ ಗೌತಮ್ ಗಂಭೀರ್ ಅವಕಾಶ ಸಿಕ್ಕಾಗೆಲ್ಲಾ ವಿರಾಟ್ ಕೊಹ್ಲಿಯನ್ನು ತೆಗಳಿದ್ದಾರೆ ಹಾಗೆಯೇ ಹೊಗಳಿದ್ದಾರೆ. ಹೀಗೆ ಕೊಹ್ಲಿ ಕುರಿತು ಕೇಳಲಾದ ಪ್ರಶ್ನೆಗೆ ಇದೀಗ ಸರಿಯಾದ ಉತ್ತರ ನೀಡುವ ಮೂಲಕ ಗೌತಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಖಾಸಗಿ ವಾಹಿನಿಯೊಂದರ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದ ಗೌತಮ್ ಗಂಭೀರ್ಗೆ ಕೆಲ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ವೇಳೆ ಯಾವ ಬೌಲರ್ ವಿರುದ್ಧ ವಿರಾಟ್ ಕೊಹ್ಲಿ ತಮ್ಮ 50ನೇ ಏಕದಿನ ಶತಕವನ್ನು ಪೂರೈಸಿದ್ದರು? ಎಂಬ ಪ್ರಶ್ನೆಯೊಂದನ್ನು ಗಂಭೀರ್ ಮುಂದಿಡಲಾಗಿತ್ತು.

ಇದಕ್ಕೆ ಗೌತಮ್ ಗಂಭೀರ್, " ಲಾಕಿ ಫರ್ಗುಸನ್" ಎಂದು ಸರಿಯಾದ ಉತ್ತರ ನೀಡಿದರು. ಆದರೆ ಅಲ್ಲಿಗೆ ಮುಗಿಸಲಿಲ್ಲ. ಬದಲಾಗಿ, ಇದನ್ನು ನೀವು ಮತ್ತೆ ಮತ್ತೆ ತೋರಿಸಬೇಕು. ನನಗೆ ಎಲ್ಲವೂ ನೆನಪಿರುತ್ತೆ. ನಮ್ಮ ಜಗಳ ಏನಿದ್ದರೂ ಮೈದಾನದಲ್ಲಿ ಮಾತ್ರ ಎಂದು ಉತ್ತರಿಸಿದ್ದಾರೆ.

ಕೆಲವರು ಗೌತಮ್ ಗಂಭೀರ್ ನೀಡಿದ ಉತ್ತರಕ್ಕೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಇಲ್ಲಿ ಜಗಳದ ವಿಷಯ ಪ್ರಸ್ತಾಪಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲ ಮಂದಿ ನೀವು ಮತ್ತೆ ಮೈದಾನದಲ್ಲಿ ಜಗಳವಾಡುವ ಸೂಚನೆ ನೀಡುತ್ತಿದ್ದೀರಿ ಎಂದು ಗೌತಮ್ ಗಂಭೀರ್ ಅವರ ಕಾಲೆಳೆದಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ನಲ್ಲಿ ಗೌತಮ್ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅತ್ತ ವಿರಾಟ್ ಕೊಹ್ಲಿ ಎಂದಿನಂತೆ ಆರ್ಸಿಬಿ ಪರ ಆಡಲಿದ್ದಾರೆ. ಹೀಗಾಗಿ ಆರ್ಸಿಬಿ-ಕೆಕೆಆರ್ ನಡುವಣ ಪಂದ್ಯವು ಗಂಭೀರ್-ವಿರಾಟ್ ಕಾರಣದಿಂದ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿರಲಿದೆ.



















