ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಚೇತೇಶ್ವರ ಪೂಜಾರ ದೇಶೀ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೆ ಫಾರ್ಮ್ಗೆ ಮರಳುವ ಯತ್ನದಲ್ಲಿದ್ದಾರೆ. ಇತ್ತ ಪೂಜಾರ ಅವರ ಸ್ಥಾನ ತೆರವಾಗಿರುವುದರಿಂದ ಅವರ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ.
ಪ್ರಸ್ತುತ ವಿಂಡೀಸ್ ಪ್ರವಾಸಕ್ಕೆ ಪೂಜಾರ ಬದಲಿಗೆ ರುತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಒಂದು ವೇಳೆ ದೇಶೀ ಸೀಸನ್ನಲ್ಲೂ ಪೂಜಾರ ಮತ್ತೆ ಫಾರ್ಮ್ ಕಂಡುಕೊಳ್ಳದಿದ್ದರೆ, ಅವರ ಸ್ಥಾನಕ್ಕೆ ಖಾಯಂ ಆಟಗಾರನೊಬ್ಬನನ್ನು ಹುಡುಕುವ ಕೆಲಸ ಬಿಸಿಸಿಐ ಮುಂದಿದೆ.
ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಾರೆ. ಈ ಕ್ರಮಾಂಕಕ್ಕೆ ಬಹಳ ಮಹತ್ವವಿದೆ. ಏಕೆಂದರೆ ಆರಂಭಿಕರು ಉತ್ತಮ ಜೊತೆಯಾಟ ನಡೆಸುವಲ್ಲಿ ವಿಫಲರಾದರೆ ಆ ಜವಬ್ದಾರಿ 3ನೇ ಕ್ರಮಾಂಕದ ಬ್ಯಾಟರ್ ಮೇಲೆ ಬೀಳುತ್ತದೆ. ಹೀಗಾಗಿ ಆ ಸ್ಥಾನವನ್ನು ತುಂಬಲು ಒಬ್ಬ ಪ್ರತಿಭಾವಂತ ಆಟಗಾರನಿಂದ ಮಾತ್ರ ಸಾಧ್ಯ. ಹೀಗಾಗಿ ಪೂಜಾರ ಬದಲಿ ಆಟಗಾರನನ್ನು ಹುಡುಕುತ್ತಿರುವ ಬಿಸಿಸಿಐಗೆ ಪ್ರಮುಖವಾಗಿ 4 ಆಯ್ಕೆಗಳಿವೆ.
1. ಶುಭ್‌ಮನ್ ಗಿಲ್- ಟೀಂ ಇಂಡಿಯಾ ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಶುಭ್‌ಮನ್ ಗಿಲ್ ಅವರನ್ನು 3ನೇ ಕ್ರಮಾಂಕದಲ್ಲಿ ಆಡಲು ಪ್ರಯತ್ನಿಸಿತ್ತು. ಏಕೆಂದರೆ ಆ ವೇಳೆಗೆ ಕೆಎಲ್ ರಾಹುಲ್, ನಾಯಕ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಈ ಮೂವರಲ್ಲಿ ಇಬ್ಬರು ಇಂಜುರಿ ಹಾಗೂ ಕಳಪೆ ಫಾರ್ಮ್ನಿಂದಾಗಿ ತಂಡದಿಂದ ಹೊರಬಿದ್ದ ಬಳಿಕ ಗಿಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿತು. ಸದ್ಯ ಆರಂಭಿಕ ಸ್ಥಾನಕ್ಕೆ ಕಿಶನ್, ಜೈಸ್ವಾಲ್, ರುತುರಾಜ್ ಸ್ಪರ್ಧೆಯಲ್ಲಿರುವುದರಿಂದ ಗಿಲ್ರನ್ನು 3ನೇ ಕ್ರಮಾಂಕದಲ್ಲಿ ಆಡಿಸಬಹುದಾಗಿದೆ.
2. ಯಶಸ್ವಿ ಜೈಸ್ವಾಲ್- ತಂಡವು ಪ್ರಯೋಗಗಳಿಗಿಂತ ನಿರಂತರತೆಗೆ ಆದ್ಯತೆ ನೀಡಿದರೆ, ಗಿಲ್ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹೀಗಾಗಿ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿರುವ ಯಶಸ್ವಿ ಜೈಸ್ವಾಲ್ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶವಿದೆ. ಅಲ್ಲದೆ ಜೈಸ್ವಾಲ್ ಎಡಗೈ ಬ್ಯಾಟರ್ ಆಗಿರುವುದು ಕೂಡ ಈ ಜಾಗಕ್ಕೆ ಉತ್ತಮ ಆಯ್ಕೆಯಾಗಿದೆ. ಹಾಗೆಯೇ ಜೈಸ್ವಾಲ್ ಕೂಡ ದೇಶೀ ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ.
3. ರುತುರಾಜ್ ಗಾಯಕ್ವಾಡ್ - ರುತುರಾಜ್ ಗಾಯಕ್ವಾಡ್ ಭಾರತ ಟೆಸ್ ತಂಡಕ್ಕೆ ಅಚ್ಚರಿಯ ಸೇರ್ಪಡೆಯಾಗಿದೆ. ಏಕೆಂದರೆ ಜೈಸ್ವಾಲ್ ಸೇರಿದಂತೆ ತಂಡದಲ್ಲಿ ಈಗಾಗಲೇ ಮೂವರು ಆರಂಭಿಕರಿದ್ದಾರೆ. ಅದಾಗ್ಯೂ ರುತುರಾಜ್ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಒಂದು ವೇಳೆ ಜೈಸ್ವಾಲ್ 3ನೇ ಕ್ರಮಾಂಕದಲ್ಲಿ ಕ್ಲಿಕ್ ಆಗದಿದ್ದರೆ, ಆಗ ರುತುರಾಜ್ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.
4. ಅಜಿಂಕ್ಯ ರಹಾನೆ - ಸದ್ಯ ಟೀಂ ಇಂಡಿಯಾದ ಉಪನಾಯಕನಾಗಿರುವ ಅಜಿಂಕ್ಯ ರಹಾನೆ ಕೂಡ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಅನುಭವಿ ರಹಾನೆ ಕೂಡ 3ನೇ ಕ್ರಮಾಂಕಕ್ಕೆ ಸೂಕ್ತ ಆಯ್ಕೆಯಾಗಲಿದ್ದಾರೆ.