- Kannada News Photo gallery Cricket photos Dinesh Karthik inaugurated T Natarajan cricket ground at Chinnappampatti village in Salem district
Natarajan Cricket Ground: ಪುಟ್ಟ ಹಳ್ಳಿಯಲ್ಲಿ ನಟರಾಜನ್ ನಿರ್ಮಿಸಿದ ಕ್ರಿಕೆಟ್ ಗ್ರೌಂಡ್ ಲೋಕಾರ್ಪಣೆ ಮಾಡಿದ ದಿನೇಶ್ ಕಾರ್ತಿಕ್
ನಟರಾಜನ್ ನಿರ್ಮಿಸಿದ ಕ್ರಿಕೆಟ್ ಗ್ರೌಂಡ್ ಅನ್ನು ಭಾರತದ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಉದ್ಘಾಟನಾ ಮಾಡಿದ್ದಾರೆ. ತಮ್ಮ ಊರಿನ ಯುವ ಪ್ರತಿಭೆಗಳ ತರಬೇತಿಗೆ ಸೂಕ್ತ ವೇದಿಕೆ ಒದಗಿಸುವುದು ನಟರಾಜನ್ ಅವರ ಉದ್ದೇಶವಾಗಿದೆ
Updated on:Jun 25, 2023 | 7:27 AM

ಭಾರತದ ಅವಕಾಶ ವಂಚಿತ ಆಟಗಾರ, ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಟಿ. ನಟರಾಜ್ ಅವರ ಕನಸಿನ ಕೂಸು ಲೋಕಾರ್ಪಣೆ ಆಗಿದೆ. ಟೀಮ್ ಇಂಡಿಯಾದಿಂದ ದೂರವಿದ್ದು ತವರಿನಲ್ಲಿ ನೆಲೆಸಿರುವ ಯಾರ್ಕರ್ ಕಿಂಗ್ ತಮ್ಮ ಹಳ್ಳಿಯಲ್ಲಿ ಕ್ರಿಕೆಟ್ ಮೈದಾನವೊಂದನ್ನು ನಿರ್ಮಿಸಿದ್ದಾರೆ.

ಇದೀಗ ಈ ಕ್ರಿಕೆಟ್ ಗ್ರೌಂಡ್ ಅನ್ನು ಭಾರತದ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಉದ್ಘಾಟನಾ ಮಾಡಿದ್ದಾರೆ. ತಮ್ಮ ಊರಿನ ಯುವ ಪ್ರತಿಭೆಗಳ ತರಬೇತಿಗೆ ಸೂಕ್ತ ವೇದಿಕೆ ಒದಗಿಸುವುದು ನಟರಾಜನ್ ಅವರ ಉದ್ದೇಶವಾಗಿದೆ. ಈ ಮೂಲಕ ತಮ್ಮ ಹಳ್ಳಿಯಲ್ಲಿ ಎಲ್ಲ ಸೌಲಭ್ಯವುಳ್ಳ ಒಂದು ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಿಸಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.

ತಮಿಳುನಾಡಿನ ಸೇಲಂ ಬಳಿಯ ಚಿನ್ನಂಪಟ್ಟಿ ಗ್ರಾಮದಲ್ಲಿ ನಟರಾಜನ್ ಈ ಕ್ರಿಕೆಟ್ ಮೈದಾನ ನಿರ್ಮಿಸಿದ್ದಾರೆ. ವಿಶೇಷ ಎಂದರೆ ತಮ್ಮಂತೆ ಊರಿನ ಮಕ್ಕಳು ದೇಶಕ್ಕಾಗಿ ಆಡಬೇಕು ಎಂಬ ಉದ್ದೇಶದಿಂದ ತಮ್ಮ ಸ್ವಂತ ಖರ್ಚಿನಿಂದಲೇ ತಾವೇ ದುಡಿದ ಹಣದಿಂದಲೇ ಈ ಕ್ರಿಕೆಟ್ ಕ್ರೀಡಾಂಗಣವನ್ನು ಮಾಡಿದ್ದಾರೆ.

ಮೈದಾನ ಉದ್ಘಾಟನೆ ವೇಳೆ ಕ್ರಿಕೆಟಿಗರಾದ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಪಿ. ಅಶೋಕ್ ಸಿಗಮಣಿ, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಸೇಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶಿವಕುಮಾರ್ ಸೇರಿದಂತೆ ತಮಿಳು ಚಿತ್ರರಂಗದ ಯೋಗಿ ಬಾಬು ಮತ್ತು ಅನೇಕರು ಹಾಜರಿದ್ದರು.

“ನನ್ನ ಹಳ್ಳಿಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಕ್ರಿಕೆಟ್ ಮೈದಾನವನ್ನು ನಿರ್ಮಿಸಿರುವುದನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ನಟರಾಜನ್ ಕ್ರಿಕೆಟ್ ಗ್ರೌಂಡ್ (ಎನ್‌ಸಿಜಿ) ಎಂಬುದಾಗಿ ಇದು ಕರೆಯಲ್ಪಡುತ್ತದೆ. ದೇವರಿಗೆ ಧನ್ಯವಾದಗಳು,”ಎಂದು ನಟರಾಜನ್ ಹೇಳಿದ್ದಾರೆ.

2020ರ ಐಪಿಎಲ್ನಲ್ಲಿ ತಮ್ಮ ಕರಾರುವಕ್ ಯಾರ್ಕರ್ ದಾಳಿಯಿಂದ ದೇಶದ ಮನೆ ಮಾತಾಗಿದ್ದ ನಟರಾಜನ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನಿರೀಕ್ಷಿತವಾಗಿ ಭಾರತ ತಂಡದಲ್ಲಿ ಅವಕಾಶ ಪಡೆದು ಮೂರೂ ಮಾದರಿಯಲ್ಲೂ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ, ಗಾಯದ ಕಾರಣ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿಯಬೇಕಾಯಿತು. ನಂತರ ಇವರನ್ನು ಆಯ್ಕೆ ಸಮಿತಿ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ.

ಐಪಿಎಲ್‌ನಿಂದ ನಟರಾಜನ್‌ರ ವೈಯಕ್ತಿಕ ಜೀವನವೂ ಬದಲಾಗಿದೆ. ದಿನಗೂಲಿ ನೌಕರರಾಗಿದ್ದ ಹೆತ್ತವರಿಗೆ ನಟರಾಜನ್ ಸ್ವಂತ ಮನೆಕಟ್ಟಿಕೊಟ್ಟಿದ್ದರು. ಸಹೋದರಿಯರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಇದೀಗ ಸ್ವಂತ ಕ್ರಿಕೆಟ್ ಅಕಾಡೆಮಿ ತೆರೆದು ತಮ್ಮ ಹಳ್ಳಿಯ ಇತರ ಪ್ರತಿಭಾನ್ವಿತ ಆಟಗಾರರಿಗೂ ಕ್ರಿಕೆಟ್ ಕಲಿಯಲು ಉತ್ತಮ ವೇದಿಕೆ ಒದಗಿಸಿಕೊಟ್ಟಿದ್ದಾರೆ.
Published On - 7:26 am, Sun, 25 June 23



















