Updated on: Jun 19, 2023 | 8:50 AM
ಫೆಬ್ರವರಿ ತಿಂಗಳಲ್ಲಿ ಕೊನೆಯದಾಗಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಿದ್ದ ಟೀಂ ಇಂಡಿಯಾ ಇದೀಗ ಬರೋಬ್ಬರಿ 6 ತಿಂಗಳ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಎಲ್ಲಾ ಮೂರು ಮಾದರಿಗಳ ಕ್ರಿಕೆಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಭಾರತ, ಪ್ರವಾಸದ ಕೊನೆಯಲ್ಲಿ ಈ ಟಿ20 ಸರಣಿಯಲ್ಲಿ ಅಖಾಡಕ್ಕಿಳಿಯಲಿದೆ.
ಜುಲೈ 12 ರಿಂದ ಕೆರಿಬಿಯನ್ ತಂಡದ ವಿರುದ್ಧ ಟೆಸ್ಟ್ ಸರಣಿ ಆರಂಭಿಸಲಿರುವ ಭಾರತ, ಆ ಬಳಿಕ ಏಕದಿನ ಸರಣಿ ಆಡಲಿದೆ. ಅಂತಿಮವಾಗಿ ಆಗಸ್ಟ್ 3 ರಿಂದ 5 ಪಂದ್ಯಗಳ ಟಿ20 ಸರಣಿಯೊಂದಿಗೆ ವಿಂಡೀಸ್ ಪ್ರವಾಸ ಮುಗಿಸಲಿದೆ. ಈ ಮೂರು ಸರಣಿಗಾಗಿ ಪೂರ್ಣ ಪ್ರಮಾಣದ ಟೀಂ ಇಂಡಿಯಾ, ವಿಂಡೀಸ್ಗೆ ಪ್ರಯಾಣ ಬೆಳೆಸುತ್ತಿದೆ.
ಆದರೆ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಆಡಲ್ಲಿರುವ ಹಲವು ಹಿರಿಯ ಮುಖಗಳಿಗೆ ಟಿ20 ಸರಣಿಯಿಂದ ಕೋಕ್ ನೀಡಲಾಗುವುದು ಎಂದು ವರದಿಯಾಗಿದೆ. ಅಲ್ಲದೆ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಟಿ20 ನಾಯಕತ್ವವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರೇ ವಿಂಡೀಸ್ ವಿರುದ್ಧ ತಂಡವನ್ನು ಮುನ್ನಡೆಸಲ್ಲಿದ್ದಾರೆ.
ವಾಸ್ತವವಾಗಿ ಟೀಂ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಶಮಿ ಟಿ20 ತಂಡದಿಂದ ಹೊರಗುಳಿದಿದ್ದಾರೆ. ಟಿ20 ತಂಡದ ಅಧಿಕೃತ ನಾಯಕರಾಗಿ ಪಾಂಡ್ಯ ಅವರನ್ನು ಹೆಸರಿಸದಿದ್ದರೂ, ಅವರು ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.
ಪಾಂಡ್ಯ ಅವರು 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ತಮ್ಮ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಮಾಡಿದ್ದರು. ಎಲ್ಲದೆ 16ನೇ ಆವೃತ್ತಿಯ ಐಪಿಎಲ್ನಲ್ಲೂ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಂತಿಮ ಎಸೆತದಲ್ಲಿ ಸೋತು ನಿರಾಸೆ ಅನುಭವಿಸಿದ್ದರು.
ಇದೀಗ ಟಿ20 ತಂಡದಿಂದ ಹಿರಿಯ ಆಟಗಾರರನ್ನು ಕೈಬಿಡಲು ಸಿದ್ಧತೆ ನಡೆಸಿರುವ ಟೀಂ ಇಂಡಿಯಾದ ಆಯ್ಕೆದಾರರು, ಹಿರಿಯರ ಬದಲಿಗೆ ಯುವ ಪ್ರತಿಭೆಗಳಾದ ಯಶಸ್ವಿ ಜೈಸ್ವಾಲ್ ಮತ್ತು ರಿಂಕು ಸಿಂಗ್ ಅವರನ್ನು ಟಿ20 ತಂಡದಲ್ಲಿ ಆಡಿಸುವ ಸಾಧ್ಯತೆ ಇದೆ. ಈ ಐದು ಪಂದ್ಯಗಳ ಟಿ20 ಸರಣಿ ಆಗಸ್ಟ್ 3, 6, 8, 12 ಮತ್ತು 13 ರಂದು ನಡೆಯಲಿವೆ. ಕೊನೆಯ ಎರಡು ಪಂದ್ಯಗಳು ಫ್ಲೋರಿಡಾದಲ್ಲಿ ನಡೆಯಲಿವೆ.