Updated on: Jun 22, 2023 | 9:07 AM
ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದು ಬಿಂಬಿತವಾಗಿರುವ ಯುವ ಬ್ಯಾಟರ್ ಶುಭಮನ್ ಗಿಲ್ ಸದ್ಯ ಮೂರೂ ಮಾದರಿಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ವರ್ಷ ಗಿಲ್ ಏಕದಿನದಲ್ಲಿ ದ್ವಿಶತಕ, ಟೆಸ್ಟ್‌ನಲ್ಲಿ ಶತಕ, ಐಪಿಎಲ್‌ನಲ್ಲಿ ಶತಕ ಮತ್ತು ಟಿ 20 ಅಂತರಾಷ್ಟ್ರೀಯ ಶತಕವನ್ನೂ ಸಿಡಿಸಿದ್ದಾರೆ. ಇದರೊಂದಿಗೆ ನಾನು ಟೀಂ ಇಂಡಿಯಾದ ಭವಿಷ್ಯದ ನಾಯಕನಾಗಲೂ ಅರ್ಹನೆಂಬ ಸಂದೇಶವನ್ನು ಬಿಸಿಸಿಐಗೆ ಕಳುಹಿಸಿದ್ದಾರೆ.
ಆದರೆ ಈ ನಡುವೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಟೀಂ ಇಂಡಿಯಾದ ಮುಂದಿನ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಗಿಲ್ ಟಿ20 ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ವಾಸ್ತವವಾಗಿ ಭಾರತ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಬೇಕಿದೆ.
ಈ ಪ್ರವಾಸದಲ್ಲಿ ಭಾರತ ಎರಡು ಟೆಸ್ಟ್ ಪಂದ್ಯಗಳನ್ನು ಹೊರತುಪಡಿಸಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಬೇಕಾಗಿದೆ. ಈ ಪ್ರವಾಸವು ಜುಲೈ 12 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 13 ರಂದು ಕೊನೆಗೊಳ್ಳಲಿದೆ.
ಈ ಪ್ರವಾಸಕ್ಕೆ ಇನ್ನು ಟೀಂ ಇಂಡಿಯಾವನ್ನು ಪ್ರಕಟಿಸಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ವೆಸ್ಟ್ ಇಂಡೀಸ್ ಪ್ರವಾಸದ ಟಿ20 ಸರಣಿಯಿಂದ ಗಿಲ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಕೆಲಸದ ಹೊರೆ ನಿರ್ವಹಣೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.
ಗಿಲ್ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಡಿಸೆಂಬರ್ನಲ್ಲಿ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಿದ್ದ ಗಿಲ್, ಅಲ್ಲಿಂದ ವಾಪಸಾದ ಬಳಿಕ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡದಲ್ಲಿದ್ದರು. ನಂತರ ಐಪಿಎಲ್‌ನಲ್ಲಿ ಆಡಿದ್ದ ಗಿಲ್, ಸೀದಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲು ಇಂಗ್ಲೆಂಡ್ಗೆ ಹಾರಿದ್ದರು.
ಈ ವರ್ಷ ಭಾರತ ಏಷ್ಯಾಕಪ್ ಮತ್ತು ನಂತರ ಏಕದಿನ ವಿಶ್ವಕಪ್ ಆಡಬೇಕಿದೆ. ಏಕದಿನ ಮಾದರಿಯಲ್ಲಿ ಗಿಲ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಹೀಗಾಗಿ ಗಿಲ್ ಈ ಐಸಿಸಿಯ ಪ್ರಮುಖ ಈವೆಂಟ್ಗೆ ಫಿಟ್ ಆಗಿರುವುದು ಬಹಳ ಮುಖ್ಯ. ಆದ್ದರಿಂದ ಗಿಲ್ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸದ ಟಿ20 ಸರಣಿಯಿಂದ ಹೊರಗಿಡಲು ಬಿಸಿಸಿಐ ಯೋಚಿಸಿದೆ.
ಒಂದು ವೇಳೆ ಟಿ20 ಸರಣಿಯಿಂದ ಗಿಲ್‌ಗೆ ವಿಶ್ರಾಂತಿ ನೀಡಿದರೆ ಅವರ ಸ್ಥಾನದಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ತಂಡದಲ್ಲಿ ಸ್ಥಾನ ಪಡೆಯಬಹುದು. ರುತುರಾಜ ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಇತ್ತೀಚೆಗೆ ಮುಗಿದ 16ನೇ ಆವೃತ್ತಿಯಲ್ಲೂ ಆರಂಭಿಕರಾಗಿ ರುತುರಾಜ್ ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದರು.
ಈ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ರುತುರಾಜ್ ಅವರನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಮೀಸಲು ಆಟಗಾರನಾಗಿ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಮದುವೆಯ ಕಾರಣದಿಂದಾಗಿ ರುತುರಾಜ್ ಇಂಗ್ಲೆಂಡ್ ಪ್ರವಾಸ ಮಾಡಿರಲಿಲ್ಲ. ಇದೀಗ ಟೀಂ ಇಂಡಿಯಾ ಸೇರಲು ಕಾತುರರಾಗಿರುವ ರುತುರಾಜ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ.
ಇನ್ನು ಟೀಂ ಇಂಡಿಯಾದಲ್ಲಿ ಗಿಲ್ ಅವರ ಪ್ರದರ್ಶನ ನೋಡುವುದಾದರೆ, ಗಿಲ್ ಇದುವರೆಗೆ ಭಾರತದ ಪರ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 32.89 ಸರಾಸರಿಯಲ್ಲಿ 921 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, 24 ಏಕದಿನ ಪಂದ್ಯಗಳಲ್ಲಿ 65.55 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಗಿಲ್ 1311 ರನ್ ಕಲೆಹಾಕಿದ್ದಾರೆ. ಟಿ20ಯಲ್ಲಿ ಗಿಲ್ ಆರು ಪಂದ್ಯಗಳನ್ನು ಆಡಿದ್ದು, ಶತಕ ಸೇರಿದಂತೆ 202 ರನ್ ಸಿಡಿಸಿದ್ದಾರೆ.