
ನಿರೀಕ್ಷೆಯಂತೆ 2025 ರ ಏಷ್ಯಾಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದರೆ, ಶುಭ್‌ಮನ್ ಗಿಲ್ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಆಯ್ಕೆಯಾಗಿರುವ ತಂಡದಲ್ಲಿ ಈಗಾಗಲೇ ನಿರೀಕ್ಷಿಸಿದ್ದ ಹೆಸರುಗಳೇ ಸೇರಿವೆ. ಆದಾಗ್ಯೂ ಟಿ20 ಕ್ರಿಕೆಟ್ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ ಅವರನ್ನು ಕಡೆಗಣಿಸಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ ಅವರನ್ನು ಏಷ್ಯಾಕಪ್ಗೆ ಆಯ್ಕೆ ಮಾಡಬೇಕೆಂಬ ಕೂಗು ಜೋರಾಗಿ ಕೇಳಿಬಂದಿತ್ತು. ಆದರೆ ಆಯ್ಕೆ ಮಂಡಳಿ ಅಯ್ಯರ್ ಅವರನ್ನು 20 ಸದಸ್ಯರ ತಂಡದಲ್ಲೂ ಸೇರಿಲ್ಲ. ಇದು ಭಾರತದ ಮಾಜಿ ಆರಂಭಿಕ ಆಟಗಾರರಾದ ಕೃಷ್ಣಮಾಚಾರಿ ಶ್ರೀಕಾಂತ್, ಅಭಿಷೇಕ್ ನಾಯರ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಕೃಷ್ಣಮಾಚಾರಿ ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದು, ‘ಶ್ರೇಯಸ್ ಅಯ್ಯರ್ ವಿರುದ್ಧ ಪಕ್ಷಪಾತ ಮಾಡಲಾಗುತ್ತಿದೆ . ಅವರು ಯಾವ ತಪ್ಪು ಮಾಡಿದರು? ಶ್ರೇಯಸ್ ಅಯ್ಯರ್ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಕೆಲವು ಸಮಯದ ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ ಅವರ ಪ್ರದರ್ಶನವನ್ನು ಏಕೆ ಪರಿಗಣಿಸಲಿಲ್ಲ?' ಎಂದು ಬಿಸಿಸಿಐಗೆ ಪ್ರಶ್ನೆ ಮಾಡಿದ್ದಾರೆ.

ಹಾಗೆಯೇ ಟೀಂ ಇಂಡಿಯಾದ ಅನುಭವಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ, ‘ಶ್ರೇಯಸ್ ಅವರ ದಾಖಲೆಯನ್ನು ನೀವು ನೋಡಿದ್ದೀರಿ, ತಂಡದಿಂದ ಹೊರಗುಳಿದ ನಂತರವೂ, ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಹಾಗೆಯೇ ಕೆಕೆಆರ್ ತಂಡ ಐಪಿಎಲ್ ಗೆಲ್ಲುವಂತೆ ಮಾಡಿದ್ದರೂ, ಅವರನ್ನು ತಂಡದಿಂದ ಬಿಡುಗಡೆ ಮಾಡಲಾಯಿತು . ಆ ನಂತರ ಪಂಜಾಬ್ ತಂಡವನ್ನು ಸೇರಿಕೊಂಡಿದ್ದ ಅಯ್ಯರ್ 11 ವರ್ಷಗಳ ನಂತರ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಕರೆದೊಯ್ದರು. ಈ ಎಲ್ಲಾ ಪ್ರದರ್ಶನದ ನಡುವೆಯೂ ಅವರನ್ನು ಕಡೆಗಣಿಸಿರುವುದು ನನಗೆ ತುಂಬಾ ಬೇಸರ ತರಿಸಿದೆ ಎಂದಿದ್ದಾರೆ.

ಈ ಹಿಂದೆ ಟೀಂ ಇಂಡಿಯಾದ ಸಹಾಯಕ ಕೋಚ್ ಆಗಿದ್ದ ಅಭಿಷೇಕ್ ನಾಯರ್ ಕೂಡ ಇದಕ್ಕೆ ಆಕ್ರೋಶ ಹೊರಹಾಕಿದ್ದು, ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯಲು ಶ್ರೇಯಸ್ ಬಲಿಷ್ಠ ಸ್ಪರ್ಧಿಯಾಗಿದ್ದರು. ಆದಾಗ್ಯೂ ಅವರನ್ನು ಮೀಸಲು ಆಟಗಾರನಾಗಿಯೂ ಆಯ್ಕೆ ಮಾಡಿಲ್ಲ. ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡದಿರಲು ಏನು ಸಮರ್ಥನೆ ಇರಬಹುದೆಂದು ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ? ಎಂದಿದ್ದಾರೆ.

ಏಷ್ಯಾಕಪ್‌ಗಾಗಿ ಟೀಂ ಇಂಡಿಯಾ: ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ. ಮೀಸಲು ಆಟಗಾರರು: ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್