
ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿದೆ. ಆರಂಭಿಕ ಜೋಡಿ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿ ಅರ್ಧಶತಕದ ಜೊತೆಯಾಟವನ್ನಾಡಿದ್ದಾರೆ. ಮೊದಲ ವಿಕೆಟ್‌ಗೆ 91 ರನ್‌ಗಳ ಜೊತೆಯಾಟವನ್ನಾಡಿದ ಇವರಿಬ್ಬರು ಭಾರತದ ಪರ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ರೋಹಿತ್ ನಿವೃತ್ತಿಯ ನಂತರ ಭಾರತದ ಆರಂಭಿಕ ಜೋಡಿ ಬದಲಾಗಿದೆ. ಅದರಂತೆ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಇಬ್ಬರೂ ಕೆಲವು ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಭಾರತದ ಇನ್ನಿಂಗ್ಸ್ ಆರಂಭಿಸಿದ ಜೋಡಿ ತಂಡಕ್ಕೆ ನಿರೀಕ್ಷಿತ ಆರಂಭವನ್ನೇ ನೀಡಿತು.

ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮೊದಲ ವಿಕೆಟ್‌ಗೆ 91 ರನ್ ಕಲೆಹಾಕಿದ್ದರು. ಯಶಸ್ವಿ ಮತ್ತು ರಾಹುಲ್ ನಡುವೆ ಉತ್ತಮ ಪಾಲುದಾರಿಕೆ ಬೆಳೆಯುತ್ತಿತ್ತು, ಆದರೆ ವೇಗಿ ಕಾರ್ಸೆ, ರಾಹುಲ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟನ್ನು ಮುರಿದರು. ಹೀಗಾಗಿ ಅರ್ಧಶತಕ ವಂಚಿತರಾದ ರಾಹುಲ್ 78 ಎಸೆತಗಳಲ್ಲಿ ಎಂಟು ಬೌಂಡರಿಗಳ ಸಹಾಯದಿಂದ 42 ರನ್ ಗಳಿಸಿ ಔಟಾದರು.

ಆದಾಗ್ಯೂ ಮೊದಲ ವಿಕೆಟ್‌ಗೆ 91 ರನ್ ಜೊತೆಯಾಟ ನೀಡಿದ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್‌ನಲ್ಲಿ ಭಾರತದ ಪರ ಅತಿದೊಡ್ಡ ಆರಂಭಿಕ ಜೊತೆಯಾಟವನ್ನಾಡಿದ ದಾಖಲೆ ಸೃಷ್ಟಿಸಿದರು. ಇದು ಮಾತ್ರವಲ್ಲದೆ 1986 ರ ನಂತರ ಮೊದಲ ಬಾರಿಗೆ ಭಾರತದ ಆರಂಭಿಕ ಜೋಡಿ ಲೀಡ್ಸ್‌ನಲ್ಲಿ 50+ ರನ್‌ಗಳ ಜೊತೆಯಾಟವನ್ನಾಡಿದ ಸಾಧನೆಯನ್ನು ಮಾಡಿದರು.

ರಾಹುಲ್ ಮತ್ತು ಜೈಸ್ವಾಲ್ ಅವರಿಗಿಂತ ಮೊದಲು, ಸುನಿಲ್ ಗವಾಸ್ಕರ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ 1986 ರಲ್ಲಿ ಲೀಡ್ಸ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕದ ಜೊತೆಯಾಟವನ್ನಾಡಿದ್ದರು. ಆ ಪಂದ್ಯದಲ್ಲಿ ಗವಾಸ್ಕರ್ ಮತ್ತು ಶ್ರೀಕಾಂತ್ ಮೊದಲ ವಿಕೆಟ್‌ಗೆ 64 ರನ್‌ಗಳನ್ನು ಸೇರಿಸಿದ್ದರು. ಇದೀಗ ರಾಹುಲ್ ಮತ್ತು ಜೈಸ್ವಾಲ್ 91 ರನ್‌ಗಳ ಜೊತೆಯಾಟ ನಿರ್ಮಿಸುವ ಮೂಲಕ ಹಳೆಯ ದಾಖಲೆ ಮುರಿದಿದ್ದಾರೆ.

ಇದು ಮಾತ್ರವಲ್ಲದೆ, ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ವಿದೇಶಿ ನೆಲದಲ್ಲಿ ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ಅತಿ ದೊಡ್ಡ ಆರಂಭಿಕ ಜೊತೆಯಾಟ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುರಳಿ ವಿಜಯ್ ಮತ್ತು ಶಿಖರ್ ಧವನ್ ಭಾರತದ ಪರ ವಿದೇಶಿ ನೆಲದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಅತಿದೊಡ್ಡ ಆರಂಭಿಕ ಜೊತೆಯಾಟವನ್ನಾಡಿದ ದಾಖಲೆ ನಿರ್ಮಿಸಿದ್ದು, ಇಬ್ಬರೂ 2015 ರಲ್ಲಿ ಬಾಂಗ್ಲಾದೇಶ ವಿರುದ್ಧ 283 ರನ್‌ಗಳ ಜೊತೆಯಾಟವನ್ನಾಡಿದ್ದರು.