
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಿದ್ದ ತಂಡದಲ್ಲಿದ್ದ ಆಟಗಾರರಿಗೆ ಈ ಸರಣಿಯಲ್ಲಿ ಆಡಲು ಅವಕಾಶ ನೀಡಲಾಗಿದೆ. ಆದಾಗ್ಯೂ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಕೆಲವರಿಗೆ ಅವಕಾಶ ನೀಡುವ ಸಲುವಾಗಿ ಕೆಲವರಿಗೆ ತಂಡದಿಂದ ಗೇಟ್ಪಾಸ್ ನೀಡಲಾಗಿದೆ.

ಇದರಲ್ಲಿ ಅಚ್ಚರಿಯ ವಿಷಯವೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ರಾಯ್‌ಪುರ ಏಕದಿನ ಪಂದ್ಯದಲ್ಲಿ 105 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದ್ದ ರುತುರಾಜ್ ಗಾಯಕ್ವಾಡ್ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಶ್ರೇಯಸ್ ಅಯ್ಯರ್ ಆಗಮನದಿಂದಾಗಿ ರುತುರಾಜ್ ಅವರನ್ನು ಕೈಬಿಡಲಾಗಿದೆಯಾದರೂ, ಫಾರ್ಮ್ನಲ್ಲಿರುವ ಆಟಗಾರನನ್ನು ಕೈಬಿಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಗೈಕ್ವಾಡ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಉತ್ತರಾಖಂಡ್ ವಿರುದ್ಧ 124 ರನ್ ಬಾರಿಸಿದ್ದ ಗಾಯಕ್ವಾಡ್ ಮುಂಬೈ ವಿರುದ್ಧ 66 ರನ್ ಗಳಿಸುವ ಮೂಲಕ ಮಹಾರಾಷ್ಟ್ರವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ ಇದರ ಹೊರತಾಗಿಯೂ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಕಡೆಗಣಿಸಲಾಗಿದೆ.

ಗಾಯಕ್ವಾಡ್ ಮಾತ್ರವಲ್ಲ, ಇತರ ನಾಲ್ಕು ಪ್ರಮುಖ ಆಟಗಾರರನ್ನು ಏಕದಿನ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಆಯ್ಕೆ ದಿನದಂದು ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಶತಕ ಬಾರಿಸಿದ್ದ ಅಕ್ಷರ್ ಪಟೇಲ್ ತಂಡಕ್ಕೆ ಆಯ್ಕೆಯಾಗಿಲ್ಲ. ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ ಕೂಡ ಆಯ್ಕೆ ದಿನದಂದು ಶತಕ ಬಾರಿಸಿದರಾದರೂ ಅವರನ್ನು ಆಯ್ಕೆ ಮಾಡಲಾಗಿಲ್ಲ.

ದೇಶಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದವರ ಕಡೆಗಣನೆ ಒಂದೆಡೆಯಾದರೆ, ವರ್ಷಗಳಿಂದ ಭಾರತ ತಂಡದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಅವರನ್ನು ಮತ್ತೆ ನಿರ್ಲಕ್ಷಿಸಲಾಗಿದೆ. ಇದರರ್ಥ ಟೀಂ ಇಂಡಿಯಾದಲ್ಲಿ ಮೊಹಮ್ಮದ್ ಶಮಿ ಅವರದ್ದು ಮುಗಿದ ಅಧ್ಯಾಯ ಎನ್ನಬಹುದು.