Updated on: Jun 24, 2023 | 7:59 AM
ಕೆರಿಬಿಯನ್ ನಾಡಿನ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡವನ್ನು ಹೆಸರಿಸಿದ ಬಿಸಿಸಿಐ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. ಅದರಲ್ಲಿ ಪ್ರಮುಖವಾದದ್ದು, ಯುವ ಆಟಗಾರರಿಗೆ ಮಣೆ ಹಾಕಿರುವ ಆಯ್ಕೆ ಮಂಡಳಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವವರಿಗೆ ತಂಡದಿಂದ ಕೋಕ್ ನೀಡಿದೆ. ಅಂತಹವರಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಹಾಗೂ ವೇಗಿ ಉಮೇಶ್ ಯಾದವ್ ಕೂಡ ಸೇರಿದ್ದಾರೆ.
ಇದೀಗ ಟೀಂ ಇಂಡಿಯಾದಲ್ಲಿ ಪೂಜಾರ ಸ್ಥಾನ ಖಾಲಿಯಾದ ಬಳಿಕ ಆ ಸ್ಥಾನಕ್ಕಾಗಿ ಇಬ್ಬರು ಯುವ ಆಟಗಾರ ನಡುವೆ ಪೈಪೋಟಿ ಆರಂಭವಾಗಿದೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ಕೋಚ್ ದ್ರಾವಿಡ್ ಈ ಇಬ್ಬರು ಆಟಗಾರರಲ್ಲಿ ಯಾರಿಗೆ ಅವಕಾಶ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಸದ್ಯ ಪೂಜಾರ ಸ್ಥಾನಕ್ಕಾಗಿ ಕಾದು ಕುಳಿತಿರುವ ಆ ಇಬ್ಬರು ಆಟಗಾರರೆಂದರೆ, ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್. ವಾಸ್ತವವಾಗಿ ಈ ಇಬ್ಬರು ಆಟಗಾರರು ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ. ಐಪಿಎಲ್‌ನಲ್ಲಿ ಜೈಸ್ವಾಲ್ ರಾಜಸ್ಥಾನ್ ಪರ ಆರಂಭಿಕರಾಗಿದ್ದರೆ, ಇತ್ತ ರುತುರಾಜ್ ಚೆನ್ನೈ ಪರ ಇನ್ನಿಂಗ್ಸ್ ಆರಂಭಿಸುತ್ತಾರೆ.
ಟೀಂ ಇಂಡಿಯಾದಲ್ಲಿ ಪೂಜಾರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದ್ದರಿಂದ ಈ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಈ ಇಬ್ಬರ ಪ್ರಥಮ ದರ್ಜೆ ಪಂದ್ಯಗಳ ಅಂಕಿಅಂಶಗಳನ್ನು ನೋಡಿದರೆ ಜೈಸ್ವಾಲ್ ಇದುವರೆಗೆ 15 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 80.21ರ ಸರಾಸರಿಯಲ್ಲಿ ಒಟ್ಟು 2734 ರನ್ ಗಳಿಸಿದ್ದಾರೆ. ಇದರಲ್ಲಿ ಒಂಬತ್ತು ಶತಕ ಹಾಗೂ ಐದು ಅರ್ಧಶತಕಗಳು ಸೇರಿವೆ.
ಇನ್ನೊಂದೆಡೆ ಗಾಯಕ್ವಾಡ್ ಅವರ ಪ್ರಥಮ ದರ್ಜೆ ಪಂದ್ಯಗಳ ಅಂಕಿಅಂಶಗಳನ್ನು ಗಮನಿಸಿದರೆ, 28 ಪಂದ್ಯಗಳನ್ನು ಆಡಿರುವ ರುತುರಾಜ್ 42.19 ರ ಸರಾಸರಿಯಲ್ಲಿ 1941 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಆರು ಶತಕಗಳು ಮತ್ತು ಒಂಬತ್ತು ಅರ್ಧ ಶತಕಗಳು ಹೊರಹೊಮ್ಮಿವೆ.
ಸದ್ಯ ಇವರಿಬ್ಬರೂ ಓಪನರ್ ಆಗಿರುವುದರಿಂದ ಟೀಂ ಇಂಡಿಯಾದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಇಬ್ಬರೂ 3ನೇ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಜೈಸ್ವಾಲ್ 2022ರ ಐಪಿಎಲ್‌ನಲ್ಲಿ ಕೆಲವು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದರು. ಅಲ್ಲದೆ ಕಳೆದ ಮಾರ್ಚ್‌ನಲ್ಲಿ ನಡೆದ ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಯಶಸ್ವಿ, ಮಧ್ಯಪ್ರದೇಶ ವಿರುದ್ಧ 213 ಮತ್ತು 144 ರನ್ ಸಿಡಿಸಿದ್ದರು.
ಮತ್ತೊಂದೆಡೆ ಗಾಯಕ್‌ವಾಡ್‌ಗೂ ಅವಕಾಶ ಸಿಕ್ಕರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ತಂತ್ರಗಾರಿಕೆ ಅವರಲ್ಲಿದೆ. ಗಾಯಕ್ವಾಡ್ ಬ್ಯಾಟಿಂಗ್‌ನ ವಿಶೇಷತೆಯೆಂದರೆ, ವಿಕೆಟ್‌ನಲ್ಲಿ ಉಳಿಯುವುದು ಹೇಗೆ ಎಂದು ಅವರಿಗೆ ತಿಳಿದಿದೆ. ಪ್ರಮುಖವಾಗಿ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬ್ಯಾಟರ್ಗೆ ಈ ತಂತ್ರಗಾರಿಕೆ ಬಹಳ ಅವಶ್ಯಕವಾಗಿರುತ್ತದೆ.