- Kannada News Photo gallery Cricket photos Ashes 2023 Young spinner Rehan Ahmed added to england ashes squad
Ashes 2023: ಮೊಯಿನ್ ಅಲಿಗೆ ಇಂಜುರಿ; ಇಂಗ್ಲೆಂಡ್ ತಂಡಕ್ಕೆ ಎಂಟ್ರಿಕೊಟ್ಟ 18ರ ಹರೆಯದ ಸ್ಪಿನ್ನರ್
Ashes 2023: ಕ್ರಿಕೆಟ್‌ನ ಮೆಕ್ಕಾ ಎಂದು ಕರೆಯಲ್ಪಡುವ ಲಾರ್ಡ್ಸ್‌ನಲ್ಲಿ ಗೆದ್ದು ಸರಣಿಯಲ್ಲಿ ಪುನರಾಗಮನ ಮಾಡಲು ಇಂಗ್ಲೆಂಡ್ ಪ್ರಯತ್ನಿಸುತ್ತದೆ. ಆದ್ದರಿಂದ ಇಂಗ್ಲೆಂಡ್ ತನ್ನ ತಂಡಕ್ಕೆ ರೆಹಾನ್ ಅವರನ್ನು ಬ್ಯಾಕಪ್ ಸ್ಪಿನ್ನರ್ ಆಗಿ ಸೇರಿಸಿಕೊಂಡಿದೆ.
Updated on: Jun 24, 2023 | 9:14 AM

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿದ್ದ ಇಂಗ್ಲೆಂಡ್ ತಂಡ ಇದೀಗ 2ನೇ ಟೆಸ್ಟ್ ಪಂದ್ಯಕ್ಕೆ ತನ್ನ ತಯಾರಿ ಆರಂಭಿಸಿದೆ. ಆದರೆ ಈ ನಡುವೆ ತಂಡದ ಏಕೈಕ ಸ್ಪಿನ್ನರ್ ಇಂಜುರಿಯಿಂದಾಗಿ ಆಂಗ್ಲರ್ ತಂಡಕ್ಕೆ 18ರ ಹರೆಯದ ಲೆಗ್‌ಸ್ಪಿನ್ನರ್ ಎಂಟ್ರಿಯಾಗಿದೆ.

ವಾಸ್ತವವಾಗಿ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಏಕೈಕ ಸ್ಪಿನ್ನರ್ ಆಗಿ ಆಲ್ರೌಂಡರ್ ಮೊಯಿನ್ ಅಲಿ ಆಡಿದ್ದರು. ಆದರೆ ಪಂದ್ಯದ ನಡುವೆ ಅಲಿ ಅವರ ಕೈ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಮುನ್ನೇಚ್ಚರಿಕೆ ಕ್ರಮವಹಿಸಿರುವ ಇಂಗ್ಲೆಂಡ್ ಮಂಡಳಿ ತಂಡಕ್ಕೆ 18ರ ಹರೆಯದ ಲೆಗ್‌ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು ಎರಡನೇ ಟೆಸ್ಟ್‌ಗೆ ತಂಡಕ್ಕೆ ಆಯ್ಕೆ ಮಾಡಿದೆ.

ಆ್ಯಶಸ್ ಸರಣಿಯ ಎರಡನೇ ಟೆಸ್ಟ್ ಮುಂದಿನ ಬುಧವಾರದಿಂದ ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ. ಈಗಾಗಲೇ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಸೋತಿದೆ. ಎಡ್ಜ್‌ಬಾಸ್ಟನ್‌ನಲ್ಲಿ, ಸ್ಟೋಕ್ಸ್ ಅವರ ಬೇಸ್‌ಬಾಲ್ ಸಿದ್ಧಾಂತವನ್ನು ಗಾಳಿಗೆ ತೂರಿದ ಆಸ್ಟ್ರೇಲಿಯಾ 2 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಹೀಗಾಗಿ ಐದು ಪಂದ್ಯಗಳ ಸರಣಿಯಲ್ಲಿ ಆಸೀಸ್ 1-0 ಮುನ್ನಡೆ ಸಾಧಿಸಿದೆ.

ಕ್ರಿಕೆಟ್‌ನ ಮೆಕ್ಕಾ ಎಂದು ಕರೆಯಲ್ಪಡುವ ಲಾರ್ಡ್ಸ್‌ನಲ್ಲಿ ಗೆದ್ದು ಸರಣಿಯಲ್ಲಿ ಪುನರಾಗಮನ ಮಾಡಲು ಇಂಗ್ಲೆಂಡ್ ಪ್ರಯತ್ನಿಸುತ್ತದೆ. ಆದ್ದರಿಂದ ಇಂಗ್ಲೆಂಡ್ ತನ್ನ ತಂಡಕ್ಕೆ ರೆಹಾನ್ ಅವರನ್ನು ಬ್ಯಾಕಪ್ ಸ್ಪಿನ್ನರ್ ಆಗಿ ಸೇರಿಸಿಕೊಂಡಿದೆ. ಕಳೆದ ಡಿಸೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುವ ಮೂಲಕ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ (18 ವರ್ಷ ಮತ್ತು 126 ದಿನ) ಎಂಬ ಖ್ಯಾತಿಗೆ ರೆಹಾನ್ ಅಹ್ಮದ್ ಪಾತ್ರರಾಗಿದ್ದರು.

ಇನ್ನು ಟೆಸ್ಟ್ ಕ್ರಿಕೆಟ್ ವಿದಾಯ ಹೇಳಿದ್ದ ಮೊಯಿನ್ ಅಲಿ ತಮ್ಮ ನಿರ್ಧಾರವನ್ನು ಬದಲಿಸಿ ಮತ್ತೆ ತಂಡಕ್ಕೆ ಎಂಟ್ರಿಕೊಟ್ಟಿದ್ದರು. ಆದರೆ ಆಸೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಅಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಬೌಲಿಂಗ್ನಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು ಮೂರು ವಿಕೆಟ್ ಪಡೆದ ಅಲಿ, ಬ್ಯಾಟಿಂಗ್ನಲ್ಲಿ 37 ರನ್ ಸಿಡಿಸಿದರು.

ಸದ್ಯ ಬೆರಳಿಗೆ ಗಾಯ ಮಾಡಿಕೊಂಡಿರುವ ಮೊಯಿನ್ ಅಲಿ ಎರಡನೇ ಟೆಸ್ಟ್ ಆರಂಭದ ವೇಳೆಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ ಅಲಿ ಚೇತರಿಸಿಕೊಳ್ಳದಿದ್ದರೆ, ಇಂಗ್ಲೆಂಡ್ ಪರ ರೆಹಾನ್ ಅಹ್ಮದ್ ಮೊದಲ ಆ್ಯಶಸ್ ಪಂದ್ಯವನ್ನಾಡಲಿದ್ದಾರೆ.
























