Updated on: Apr 15, 2023 | 3:03 PM
IPL 2023 ರ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಅಫ್ಘಾನಿಸ್ತಾನ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಲಿದ್ದು, ಆ ಬಳಿಕ ಏಕದಿನ ಸರಣಿಯನ್ನು ಆಯೋಜಿಸಲು ಬಿಸಿಸಿಐ ಮುಂದಾಗಿದೆ.
ಮೇ ತಿಂಗಳಾಂತ್ಯದಲ್ಲಿ IPL ಮುಗಿಯಲಿದ್ದು, ಇದರ ನಂತರ ಜೂನ್. 7 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಶುರುವಾಗಲಿದೆ. ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.
ಇದರ ಬೆನ್ನಲ್ಲೇ ಭಾರತವು ಅಫ್ಘಾನಿಸ್ತಾನ್ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಗಾಗಿ ಆತಿಥ್ಯವಹಿಸಲಿದೆ. ಸದ್ಯ ವೇಳಾಪಟ್ಟಿ ನಿಗದಿಪಡಿಸದಿದ್ದರೂ, ಜೂನ್ 2ನೇ ವಾರದಲ್ಲೇ ಈ ಸರಣಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಏಕೆಂದರೆ ಜೂನ್-ಜುಲೈ ವೇಳೆ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಕೂಡ ಸರಣಿ ಆಡಬೇಕಿದೆ. ವೇಳಾಪಟ್ಟಿ ನಿಗದಿಯಾಗದ ಈ ಸರಣಿಯಲ್ಲಿ 2 ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಾಗುತ್ತದೆ.
ಈ ಸರಣಿ ಬಳಿಕ ಟೀಮ್ ಇಂಡಿಯಾ ಮುಂದೆ ಏಷ್ಯಾಕಪ್ ಸವಾಲು ಎದುರಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಏಷ್ಯಾಕಪ್ ವೇಳಾಪಟ್ಟಿ ಕೂಡ ನಿಗದಿಯಾಗಿಲ್ಲ. ಆದರೆ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ನಡೆಯುವುದು ಬಹುತೇಕ ಖಚಿತವಾಗಿದೆ.
ಹೀಗಾಗಿ ಏಷ್ಯಾಕಪ್ಗೂ ಮುನ್ನ ಈ ಎರಡು ಸರಣಿಗಳನ್ನು ಮುಗಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ಸರಣಿ ನಡೆಯಲಿದ್ದು, ಇದರ ನಂತರ ಏಕದಿನ ವಿಶ್ವಕಪ್ ಶುರುವಾಗಲಿದೆ. ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಜರುಗಲಿದ್ದು, 2 ತಿಂಗಳುಗಳ ಕಾಲ 10 ತಂಡಗಳ ನಡುವೆ ಕ್ರಿಕೆಟ್ ಕದನ ನಡೆಯಲಿದೆ.