Updated on: Feb 02, 2023 | 5:30 PM
ನ್ಯೂಜಿಲೆಂಡ್ ವಿರುದ್ಧದ ಸರಣಿ ಮುಗಿಸಿರುವ ಟೀಮ್ ಇಂಡಿಯಾ ಇದೀಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿದೆ. ಫೆಬ್ರವರಿ 9 ರಿಂದ ಶುರುವಾಗಲಿರುವ ಈ ಪ್ರತಿಷ್ಠಿತ ಸರಣಿ ಆರಂಭಕ್ಕೂ ಮುನ್ನವೇ ಇದೀಗ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ.
ಭಾರತ ತಂಡದ ಪ್ರಮುಖ ಆಟಗಾರ ಶ್ರೇಯಸ್ ಅಯ್ಯರ್ ಫೆಬ್ರವರಿ 9 ರಿಂದ ಶುರುವಾಗಲಿರುವ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ ಅಯ್ಯರ್ ಇನ್ನೂ ಕೂಡ ಚೇತರಿಸಿಕೊಂಡಿಲ್ಲ.
ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದಾಗ್ಯೂ ಬಿಸಿಸಿಐ ಬದಲಿ ಆಟಗಾರನನ್ನು ಆಯ್ಕೆ ಮಾಡುವುದು ಅನುಮಾನ. ಏಕೆಂದರೆ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಸೂರ್ಯಕುಮಾರ್ ಇದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಸೂರ್ಯ ಕಣಕ್ಕಿಳಿಯುವ ಸಾಧ್ಯತೆಯಿದೆ.
ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಯ್ಯರ್ ಫೆಬ್ರವರಿ 17 ರಿಂದ ದೆಹಲಿಯಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್ ವೇಳೆಗೆ ಭಾರತ ತಂಡವನ್ನು ಸೇರುವ ನಿರೀಕ್ಷೆಯಿದೆ.
ಟೀಮ್ ಇಂಡಿಯಾ ಪರ ಇದುವರೆಗೆ 7 ಟೆಸ್ಟ್ ಪಂದ್ಯಗಳಲ್ಲಿ 12 ಇನಿಂಗ್ಸ್ ಆಡಿರುವ ಶ್ರೇಯಸ್ ಅಯ್ಯರ್ 65ರ ಸರಾಸರಿಯಲ್ಲಿ ಒಟ್ಟು 624 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಅರ್ಧಶತಕಗಳನ್ನು ಬಾರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿ ರೂಪುಗೊಂಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.