
ಇಂಗ್ಲೆಂಡ್ ವಿರುದ್ದದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ 2ನೇ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತು. ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿತು. ಓವಲ್ ಮೈದಾನದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಮತ್ತೆ ಭರ್ಜರಿ ಜಯ ದಾಖಲಿಸಿರುವ ಟೀಮ್ ಇಂಡಿಯಾ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಮ್ಯಾಚೆಂಸ್ಟರ್ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತ ಗೆಲುವು ಅಥವಾ ಡ್ರಾ ಸಾಧಿಸಿದರೆ ಸರಣಿ ಟೀಮ್ ಇಂಡಿಯಾ ವಶವಾಗಲಿದೆ.

ಆದರೆ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇದೀಗ ಟೀಮ್ ಇಂಡಿಯಾಗೆ ಹೊಸ ಚಿಂತೆ ಎದುರಾಗಿದೆ. ಹೌದು, ನಾಲ್ಕನೇ ಟೆಸ್ಟ್ ಪಂದ್ಯದ ಗೆಲುವಿನ ರೂವಾರಿಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ದ್ವಿತೀಯ ಇನಿಂಗ್ಸ್ನಲ್ಲಿ ಭರ್ಜರಿ ಶತಕ (127 ರನ್) ಬಾರಿಸಿ ಟೀಮ್ ಇಂಡಿಯಾ ಮೊತ್ತವನ್ನು 466 ಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿಟ್ಮ್ಯಾನ್ ಇಂಗ್ಲೆಂಡ್ ವೇಗಿಗಳಿಂದ ಗಾಯಗೊಂಡಿದ್ದರು.

ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಯಿಂದಾಗಿ ರೋಹಿತ್ ಶರ್ಮಾ ತೊಡೆ ಭಾಗದಲ್ಲಿ ಹಲವು ಬಾರಿ ಚೆಂಡು ಬಡಿದಿತ್ತು. ಇದರಿಂದ ಸಣ್ಣ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿತ್ತು. ಅಷ್ಟೇ ಅಲ್ಲದೆ ಚೆಂಡು ಬಡಿದ ನೋವಿನಿಂದ ಹಿಟ್ಮ್ಯಾನ್ ಬಳಲಿದ್ದರು. ಇನ್ನು ರನ್ ಓಡುವ ವೇಳೆ ಎಡ ಮೊಣಕಾಲಿಗೆ ಪಾದ ಕೂಡ ತಿರುಚಿಕೊಂಡಿತ್ತು. ಹೀಗಾಗಿ ಇಂಗ್ಲೆಂಡ್ ಇನಿಂಗ್ಸ್ ವೇಳೆ ರೋಹಿತ್ ಶರ್ಮಾ ಫೀಲ್ಡಿಂಗ್ಗೆ ಇಳಿದಿರಲಿಲ್ಲ.

ಇದೇ ಕಾರಣದಿಂದ ಇದೀಗ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫಾರ್ಡ್ನಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟೆಸ್ಟ್ನಲ್ಲಿ ಹಿಟ್ಮ್ಯಾನ್ ಆಡುವುದು ಅನುಮಾನ ಎನ್ನಲಾಗಿದೆ. ಇದಾಗ್ಯೂ ಕೊನೆಯ ಪಂದ್ಯವನ್ನಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ರೋಹಿತ್ ಶರ್ಮಾ. ಪಂದ್ಯಕ್ಕೆ ಇನ್ನು 3 ದಿನಗಳಿವೆ. ಸದ್ಯ ಗಾಯವನ್ನು ಪರಿಶೀಲಿಸಲಾಗುತ್ತಿದೆ. ಫಿಸಿಯೋ ಗಾಯದ ಬಗ್ಗೆ ಕ್ಷಣ ಕ್ಷಣಕ್ಕೂ ಗಮನ ಹರಿಸುತ್ತಿದ್ದಾರೆ. ಅಂತಹ ಗಂಭೀರ ಗಾಯವಲ್ಲ. ಹೀಗಾಗಿ ಬೇಗ ಗುಣವಾಗುತ್ತೆ ಎಂದು ಭಾವಿಸುತ್ತೇನೆ ಎಂದು ರೋಹಿತ್ ಹೇಳಿದ್ದಾರೆ.

ಹೀಗಾಗಿ ಇನ್ನೆರಡು ದಿನಗಳಲ್ಲಿ ಹಿಟ್ಮ್ಯಾನ್ ಚೇತರಿಸಿಕೊಂಡರೆ ಮಾತ್ರ ಫೈನಲ್ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಒಂದು ವೇಳೆ ರೋಹಿತ್ ಶರ್ಮಾ ಅಂತಿಮ ಟೆಸ್ಟ್ಗೆ ಅಲಭ್ಯರಾದರೆ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಡ್ರಾ ಸಾಧಿಸಿದರೂ ಸರಣಿ ಭಾರತ ಪಾಲಾಗಲಿದೆ. ಈ ಮೂಲಕ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಜಯಿಸುವ ವಿಶ್ವಾಸದಲ್ಲಿದೆ ಭಾರತ ತಂಡ.