
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 14ರಿಂದ ಅಂದರೆ ನಾಳೆಯಿಂದ ಆರಂಭವಾಗುತ್ತಿದೆ. ಈ ಸರಣಿ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕೊಹ್ಲಿ ಬಹಳ ದಿನಗಳ ನಂತರ ಏಕದಿನ ಪಂದ್ಯವನ್ನಾಡುತ್ತಿದ್ದರೆ, ರೋಹಿತ್ ಶರ್ಮಾ ಈ ಹಿಂದೆ ನಡೆದಿದ್ದ ಅಫ್ಘಾನ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿದಿದ್ದರು (PC-PTI).

ಇವರಿಬ್ಬರು ಈ ಸರಣಿಯಲ್ಲಿ ಅಬ್ಬರಿಸಿದರೆ ಹಲವು ದಾಖಲೆಗಳು ಸೃಷ್ಟಿಯಾಗಲಿವೆ. ಇದರ ಜೊತೆಗೆ ರೋಹಿತ್, ಕೊಹ್ಲಿ ಹಾಗೂ ಶುಭ್‌ಮನ್ ಗಿಲ್ ನಡುವೆ ಇದೀಗ ಪೈಪೋಟಿ ಏರ್ಪಟ್ಟಿದೆ. ಈ ಸರಣಿಯಲ್ಲಿ ಈ ಮೂವರಲ್ಲಿ ಯಾರು ಅಮೋಘ ಪ್ರದರ್ಶನ ನೀಡುತ್ತಾರೋ ಅವರು ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಹೊಂದಿದ್ದಾರೆ(PC-PTI).

ಭಾರತ ತಂಡವು ಪ್ರಸ್ತುತ ಐಸಿಸಿ ಏಕದಿನ ತಂಡದ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಸ್ಥಾನದಲ್ಲಿದೆ. ತಂಡದ ವಿಷಯದಲ್ಲಿ ಮಾತ್ರವಲ್ಲ, ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲೂ ಭಾರತೀಯ ಆಟಗಾರರು ಪಾರುಪತ್ಯ ಮೆರೆದಿದ್ದಾರೆ. ವಿಶ್ವದ ಟಾಪ್ -4 ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯರೇ ಇದ್ದಾರೆ. ಪ್ರಸ್ತುತ, ನ್ಯೂಜಿಲೆಂಡ್‌ನ ಸ್ಟಾರ್ ಆಟಗಾರ ಡ್ಯಾರಿಲ್ ಮಿಚೆಲ್ 815 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ(PC-PTI).

ಉಳಿದಂತೆ ಭಾರತದ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್ 791 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 768 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ ಮತ್ತು ರೋಹಿತ್ ಶರ್ಮಾ 754 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರು ಅಗ್ರಸ್ಥಾನಕ್ಕೇರುತ್ತಾರೆ(PC-PTI).

ರೇಟಿಂಗ್ ಪಾಯಿಂಟ್‌ಗಳ ವಿಷಯದಲ್ಲಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಮೂರು ಪಂದ್ಯಗಳಲ್ಲಿ ಅಗ್ರಸ್ಥಾನದಲ್ಲಿರುವ ಡ್ಯಾರಿಲ್ ಮಿಚೆಲ್ ಅವರನ್ನು ಹಿಂದಿಕ್ಕುವುದು ಕಷ್ಟಕರವಾಗಬಹುದು, ಆದರೆ ಇಂಗ್ಲೆಂಡ್ ನೆಲದಲ್ಲಿ ಇವರಿಬ್ಬರ ಈ ಹಿಂದಿನ ದಾಖಲೆಯನ್ನು ಗಮನಿಸಿದರೆ ಏನು ಬೇಕಾದರೂ ನಡೆಯಬಹುದು. ರೋಹಿತ್ ಶರ್ಮಾ ಇಂಗ್ಲೆಂಡ್ನಲ್ಲಿ ಸರಾಸರಿ 64.91 ರನ್ ಗಳಿಸಿದರೆ, ಕಿಂಗ್ ವಿರಾಟ್ ಕೊಹ್ಲಿ 51.88 ರ ಪ್ರಭಾವಶಾಲಿ ಸರಾಸರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ(PC-PTI).

ಮತ್ತೊಂದೆಡೆ, ಎರಡನೇ ಸ್ಥಾನದಲ್ಲಿರುವ ಯುವ ನಾಯಕ ಶುಭ್‌ಮನ್ ಗಿಲ್ ಈ ಸರಣಿಯಲ್ಲಿ ಒಂದು ಅಥವಾ ಎರಡು ಪಂದ್ಯ ಗೆಲ್ಲುವ ಇನ್ನಿಂಗ್ಸ್‌ಗಳನ್ನು ಆಡಿದರೆ, ಅವರು ಡ್ಯಾರಿಲ್ ಮಿಚೆಲ್ ಅವರನ್ನು ಸುಲಭವಾಗಿ ಹಿಂದಿಕ್ಕಿ ವಿಶ್ವದ ನಂಬರ್ ಒನ್ ಏಕದಿನ ಬ್ಯಾಟ್ಸ್‌ಮನ್ ಆಗಿ ಇತಿಹಾಸವನ್ನು ರಚಿಸಬಹುದು.
Published On - 7:04 pm, Mon, 13 July 26