ಗುರುವಾರ (ಜೂ.27) ನಡೆಯಲಿರುವ ಟಿ20 ವಿಶ್ವಕಪ್ನ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹವಾಮಾನ ವರದಿಗಳ ಪ್ರಕಾರ, ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡುವುದು ಬಹುತೇಕ ಖಚಿತ.
ಅದರಲ್ಲೂ ಪಂದ್ಯ ನಿಗದಿತ ಸಮಯದ ವೇಳೆ ಶೇ.50 ರಿಂದ ಶೇ.80 ರಷ್ಟು ಮಳೆಯಾಗಲಿದೆ ಎಂದು ಬಹುತೇಕ ಅಕ್ಯುವೆದರ್ ರಿಪೋರ್ಟ್ ಸೇರಿದಂತೆ ಬಹುತೇಕ ಹವಾಮಾನ ವರದಿಗಳು ತಿಳಿಸಿದೆ. ಹೀಗಾಗಿ ನಿಗದಿತ ಸಮಯದೊಳಗೆ ಮ್ಯಾಚ್ ನಡೆಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಲಾಗುತ್ತದೆ.
ಒಂದು ವೇಳೆ ಪಂದ್ಯದ ಸಮಯದಲ್ಲಿ ಬಂದರೆ ಓವರ್ ಕಡಿತಕ್ಕೂ ಸಮಯ ನಿಗದಿ ಮಾಡಲಾಗಿದೆ. ಅದರಂತೆ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಪಂದ್ಯ ಶುರುವಾಗಲಿದ್ದು, ಇದಾದ ಬಳಿಕ 4 ಗಂಟೆಗಳ ಕಾಲ ಯಾವುದೇ ಓವರ್ ಕಡಿತ ಇರುವುದಿಲ್ಲ. ಅಂದರೆ 12.10 ರೊಳಗೆ ಮಳೆ ಬಂದು ಪಂದ್ಯ ತಡವಾದರೂ ಯಾವುದೇ ಓವರ್ ಕಡಿತ ಮಾಡುವುದಿಲ್ಲ ಎಂದು ಐಸಿಸಿ ಮೂಲಗಳು ತಿಳಿಸಿವೆ.
ಇನ್ನು ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೆ 12.10 AM (IST) ಬಳಿಕ ಓವರ್ ಕಡಿತ ಮಾಡಲಾಗುತ್ತದೆ. ಹೀಗಾಗಿ ಪಂದ್ಯಕ್ಕೆ ನಿಗದಿಯಾದ ಮೊದಲ ನಾಲ್ಕು ಗಂಟೆಗಳ ಒಳಗೆ ಮಳೆ ಬಂದು ಪಂದ್ಯ ವಿಳಂಬವಾದರೂ ಸಂಪೂರ್ಣ 20 ಓವರ್ಗಳ ಮ್ಯಾಚ್ ನಡೆಯಲಿದೆ. ಇನ್ನು 12.15 ರಿಂದ ಪ್ರತಿ ಐದು ನಿಮಿಷದಂತೆ ಒಂದೊಂದು ಓವರ್ಗಳನ್ನು ಕಡಿತ ಮಾಡಲಾಗುತ್ತದೆ.
ಮೀಸಲು ದಿನದಾಟವಿಲ್ಲ: ಭಾರತ ಮತ್ತು ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನದಾಟವಿಲ್ಲ. ಒಂದು ವೇಳೆ ಮಳೆ ಬಂದರೆ 250 ನಿಮಿಷಗಳನ್ನು ಹೆಚ್ಚುವರಿ ಬಳಸಲಾಗುತ್ತದೆ. ಈ ಮೂಲಕ ಪಂದ್ಯವನ್ನು ಆಯೋಜಿಸಲು ಪ್ರಯತ್ನಿಸಲಿದ್ದಾರೆ. ಇದಾಗ್ಯೂ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದೇ ಇದ್ದರೆ, ಮ್ಯಾಚ್ ರದ್ದಾಗಲಿದೆ. ಅಲ್ಲದೆ ಸೂಪರ್-8 ಹಂತದ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವು ಫೈನಲ್ಗೆ ಪ್ರವೇಶಿಸಲಿದೆ.