ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 21 ರನ್ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 19 ಓವರ್ವರೆಗೂ ಕಲೆಹಾಕಿದ್ದು 149 ರನ್ಗಳು ಮಾತ್ರ. ಆದರೆ ಕೊನೆಯ ಓವರ್ನಲ್ಲಿ ಇಡೀ ಪಂದ್ಯ ಚಿತ್ರಣ ಬದಲಾಯ್ತು.
ಅರ್ಷದೀಪ್ ಸಿಂಗ್ ಎಸೆದ 20ನೇ ಓವರ್ನ ಮೊದಲ 3 ಎಸೆತಗಳಲ್ಲಿ ಡ್ಯಾರಿಲ್ ಮಿಚೆಲ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ್ದರು. ಅಷ್ಟೇ ಅಲ್ಲದೆ 4ನೇ ಎಸೆತದಲ್ಲಿ ಫೋರ್ ಕೂಡ ಬಾರಿಸಿದರು. ಪರಿಣಾಮ ಕೊನೆಯ ಓವರ್ನಲ್ಲಿ 27 ರನ್ ಮೂಡಿಬಂತು. ಇದರೊಂದಿಗೆ ನ್ಯೂಜಿಲೆಂಡ್ ತಂಡದ ಮೊತ್ತ 176 ಕ್ಕೆ ಬಂದು ನಿಂತಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 155 ರನ್ಗಳಿಸಿ 21 ರನ್ಗಳಿಂದ ಸೋಲೊಪ್ಪಿಕೊಂಡಿತು.
ಕೊನೆಯ ಓವರ್ನಲ್ಲಿ ಅರ್ಷದೀಪ್ ಸಿಂಗ್ 27 ರನ್ ಬಿಟ್ಟುಕೊಟ್ಟಿದ್ದು ಟೀಮ್ ಇಂಡಿಯಾ ಸೋಲಿಗೆ ಕಾರಣ ಎಂದರೂ ತಪ್ಪಾಗಲಾರದು. ಅಷ್ಟೇ ಅಲ್ಲದೆ ದುಬಾರಿ ಓವರ್ ಎಸೆಯುವ ಮೂಲಕ ಎಡಗೈ ವೇಗಿ ಕೆಟ್ಟ ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಓವರ್ನಲ್ಲಿ ಅತ್ಯಧಿಕ ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕಳಪೆ ದಾಖಲೆಯೊಂದು ಇದೀಗ ಅರ್ಷದೀಪ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿತ್ತು.
2012 ರಲ್ಲಿ ಸೌತ್ ಆಫ್ರಿಕಾ ವಿರುದ್ಧ 20ನೇ ಓವರ್ ಎಸೆದಿದ್ದ ರೈನಾ 26 ರನ್ ನೀಡಿದ್ದರು. ಇದೀಗ 27 ರನ್ ನೀಡುವ ಮೂಲಕ ಅರ್ಷದೀಪ್ ಸಿಂಗ್ ಕೆಟ್ಟ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ 2 ಬಾರಿ 25 ಕ್ಕಿಂತ ಹೆಚ್ಚು ರನ್ ನೀಡಿದ ಬೌಲರ್ ಎಂಬ ಹೀನಾಯ ದಾಖಲೆ ಕೂಡ ಅರ್ಷದೀಪ್ ಸಿಂಗ್ ಪಾಲಾಗಿದೆ.
ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧ ಹ್ಯಾಟ್ರಿಕ್ ನೋಬಾಲ್ ಎಸೆಯುವ ಮೂಲಕ ಕೂಡ ಕಳಪೆ ದಾಖಲೆಯೊಂದನ್ನು ಬರೆದಿದ್ದರು. ಒಟ್ಟಿನಲ್ಲಿ ಅತ್ಯುತ್ತಮವಾಗಿ ಟಿ20 ಕೆರಿಯರ್ ಆರಂಭಿಸಿದ್ದ ಅರ್ಷದೀಪ್ ಸಿಂಗ್ ಇದೀಗ ಬ್ಯಾಕ್ ಟು ಬ್ಯಾಕ್ ಕೆಟ್ಟ ದಾಖಲೆಗಳನ್ನು ಬರೆಯುತ್ತಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.