
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅಜೇಯ ಶತಕದ ಇನ್ನಿಂಗ್ಸ್ ಆಡಿದರು. ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಹುಲ್ ತಂಡದ ಇನ್ನಿಂಗ್ಸ್ ನಿಭಾಯಿಸಿದ್ದು ಮಾತ್ರವಲ್ಲದೆ, ಕಠಿಣ ಸಂದರ್ಭಗಳಲ್ಲಿ ಅದ್ಭುತ ಅಜೇಯ ಶತಕ ಗಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಅಗ್ರ ಕ್ರಮಾಂಕ ಕೈಕೊಟ್ಟಿತು. ಇದರಿಂದ ತಂಡ ಕೂಡ ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಸ್ಟಾರ್ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, 5 ನೇ ಕ್ರಮಾಂಕದಲ್ಲಿ ಬಂದ ರಾಹುಲ್ ಅದ್ಭುತ ಪ್ರದರ್ಶನ ನೀಡಿದರು.

ಈ ಪಂದ್ಯದಲ್ಲಿ ಕೆಎಲ್ ರಾಹುಲ್ 92 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಂತೆ ಅಜೇಯ 112 ರನ್ ಬಾರಿಸಿದರು. ಈ ಶತಕ ಕೇವಲ ಒಂದು ಸ್ಮರಣೀಯ ಇನ್ನಿಂಗ್ಸ್ ಆಗಿರಲಿಲ್ಲ, ಬದಲಿಗೆ ರಾಜ್‌ಕೋಟ್ ಮೈದಾನದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾದರು.

ಈ ಹಿಂದೆ, ಶಿಖರ್ ಧವನ್ ಈ ರಾಜ್‌ಕೋಟ್ ಮೈದಾನದಲ್ಲಿ 96 ರನ್ ಬಾರಿಸಿದ್ದು, ಇದುವರೆಗಿನ ಅತ್ಯಧಿಕ ಸ್ಕೋರ್ ಆಗಿತ್ತು. ಆದರೆ ಯಾವುದೇ ಭಾರತೀಯ ಆಟಗಾರನಿಗೆ ಈ ಮೈದಾನದಲ್ಲಿ ತ್ರಿವಳಿ ಅಂಕೆಗಳನ್ನು ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ಮೈದಾನದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ ರಾಹುಲ್, ಚೊಚ್ಚಲ ಶತಕ ಸಿಡಿಸಿ ಮಿಂಚಿದರು.

ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ರಾಹುಲ್, ರವೀಂದ್ರ ಜಡೇಜಾ ಅವರೊಂದಿಗೆ 73 ರನ್‌ಗಳ ಜೊತೆಯಾಟವನ್ನಾಡಿ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿದರು. ನಂತರ ನಿತೀಶ್ ಕುಮಾರ್ ರೆಡ್ಡಿ ಅವರೊಂದಿಗೆ ಅರ್ಧಶತಕದ ಜೊತೆಯಾಟವನ್ನಾಡಿ ತಂಡವನ್ನು 284 ರನ್ಗಳಿಗೆ ಕೊಂಡೊಯ್ದರು.

ಇದು ರಾಹುಲ್ ಅವರ ಎಂಟನೇ ಏಕದಿನ ಶತಕ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡನೇ ಶತಕವಾಗಿದೆ. ಈ ಇನ್ನಿಂಗ್ಸ್ ರಾಹುಲ್ ಅವರ ವೃತ್ತಿಜೀವನದ ಅತ್ಯುತ್ತಮ ಸ್ಕೋರ್‌ಗಳಲ್ಲಿ ಒಂದಾಗಿದ್ದು, 2020 ರಲ್ಲಿ ಮೌಂಟ್ ಮೌಂಗನುಯಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ರಾಹುಲ್ 112 ರನ್ ಬಾರಿಸಿದ್ದರು. ಇದೀಗ ಅದನ್ನು ರಾಹುಲ್ ಸರಿಗಟ್ಟಿದ್ದಾರೆ.

ಈ ಶತಕದೊಂದಿಗೆ ವಿಶೇಷ ಪಟ್ಟಿಗೆ ಸೇರಿರುವ ರಾಹುಲ್, ಭಾರತದಲ್ಲಿ ಮತ್ತು ನ್ಯೂಜಿಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿದ ಆರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ರಾಹುಲ್ಗೂ ಮೊದಲು, ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಸೇರಿದ್ದಾರೆ.