
Asia Cup 2025 Final: ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ದುಬೈನಲ್ಲಿ ಇಂದು (ಸೆ.28) ನಡೆಯಲಿರುವ ಏಷ್ಯಾಕಪ್ 2025ರ ಫೈನಲ್ ಮ್ಯಾಚ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಪಾಕ್ ತಂಡದ ವಿಕೆಟ್ ಕೀಪರ್ ಮೊಹಮ್ಮದ್ ಹಾರಿಸ್ ಗಾಯಗೊಂಡಿದ್ದಾರೆ.

ಶನಿವಾರ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ವಾಸಿಂ ಜೂನಿಯರ್ ಎಸೆದ ಚೆಂಡು ಮೊಹಮ್ಮದ್ ಹಾರಿಸ್ ಅವರ ಹೊಟ್ಟೆಗೆ ಬಡಿದಿದೆ. ಈ ನೋವಿನಿಂದಾಗಿ ಹಾರಿಸ್ ಅರ್ಧದಲ್ಲೇ ಅಭ್ಯಾಸ ನಿಲ್ಲಿಸಿ ಮರಳಿದ್ದಾರೆ. ಇತ್ತ ಹಾರಿಸ್ ಗಾಯಗೊಂಡಿರುವುದು ಪಾಕ್ ಪಡೆಯ ಚಿಂತೆಯನ್ನು ಹೆಚ್ಚಿಸಿದೆ.

ಏಕೆಂದರೆ ಈ ಬಾರಿಯ ಟೂರ್ನಿಗೆ ಪಾಕಿಸ್ತಾನ್ ತಂಡವು ಬ್ಯಾಕಪ್ ವಿಕೆಟ್ ಕೀಪರ್ನನ್ನು ಆಯ್ಕೆ ಮಾಡಿಲ್ಲ. ಈ ಹಿಂದೆ ಮೊಹಮ್ಮದ್ ರಿಝ್ವಾನ್ ಪ್ರಮುಖ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡರೆ, ಹಾರಿಸ್ ಬ್ಯಾಕಪ್ ಆಗಿ ತಂಡದಲ್ಲಿರುತ್ತಿದ್ದರು. ಆದರೆ ಈ ಬಾರಿ ರಿಝ್ವಾನ್ ಅವರನ್ನು ಕೈ ಬಿಟ್ಟು ಮೊಹಮ್ಮದ್ ಹಾರಿಸ್ ಅವರನ್ನು ಮುಖ್ಯ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

ಇದೀಗ ಮೊಹಮ್ಮದ್ ಹಾರಿಸ್ ಗಾಯಗೊಂಡಿದ್ದಾರೆ. ಒಂದು ವೇಳೆ ಅವರು ಫೈನಲ್ ಪಂದ್ಯದಿಂದ ಹೊರಗುಳಿದರೆ, ಬದಲಿಯಾಗಿ ಕಣಕ್ಕಿಳಿಯಲು ಪಾಕ್ ತಂಡದಲ್ಲಿಲ್ಲ ವಿಕೆಟ್ ಕೀಪರ್ ಇಲ್ಲ. ಅಂದರೆ 15 ಸದಸ್ಯರುಗಳ ತಂಡದಲ್ಲಿ ಇದ್ದ ಏಕೈಕ ವಿಕೆಟ್ ಕೀಪರ್ ಹಾರಿಸ್. ಇದೀಗ ಹೆಚ್ಚುವರಿ ವಿಕೆಟ್ ಕೀಪರ್ ಇಲ್ಲದೆ ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ್ ತಂಡ ಸಂಕಷ್ಟಕ್ಕೆ ಸಿಲುಕಿದೆ.

ಒಂದು ವೇಳೆ ಮೊಹಮ್ಮದ್ ಹಾರಿಸ್ ಹೊರಗುಳಿದರೆ, ಯಾವುದಾದರೂ ಆಟಗಾರ ವಿಕೆಟ್ ಕೀಪಿಂಗ್ ಗ್ಲೌಸ್ ತೊಡಬೇಕಾಗಿ ಬರಬಹುದು. ಅದರಲ್ಲೂ ಹೈವೋಲ್ಟೇಜ್ ಮ್ಯಾಚ್ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿಯೇ ಮೊಹಮ್ಮದ್ ಹಾರಿಸ್ ಗಾಯವು ಇದೀಗ ಪಾಕಿಸ್ತಾನ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.