
ಸೌತ್ ಆಫ್ರಿಕಾ ವಿರುದ್ದದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೂ, ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಚಿಂತೆ ದೂರವಾಗಿಲ್ಲ. ಟೀಮ್ ಇಂಡಿಯಾ ಆರಂಭಿಕರಾದ ಇಶಾನ್ ಕಿಶನ್ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ಒದಗಿಸಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ರನ್ ವೇಗ ಕುಂಠಿತವಾಗುತ್ತಿದೆ.

ಅದರಲ್ಲೂ ತಂಡದ ನಾಯಕ ರಿಷಭ್ ಪಂತ್ ಸತತವಾಗಿ ವೈಫಲ್ಯ ಹೊಂದುತ್ತಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಪಂತ್ ಕಳೆದ 3 ಟಿ20 ಪಂದ್ಯಗಳಲ್ಲಿ ಕಲೆಹಾಕಿದ್ದು ಕೇವಲ 40 ರನ್ ಗಳಿಸಲಷ್ಟೇ. ಅವರ ಬ್ಯಾಟ್‌ನಿಂದ ಕೇವಲ 2 ಬೌಂಡರಿ ಮತ್ತು 2 ಸಿಕ್ಸರ್‌ಗಳು ಮಾತ್ರ ಮೂಡಿ ಬಂದಿವೆ. ಕಳೆದ ಎರಡು ಪಂದ್ಯಗಳಲ್ಲಿ ಪಂತ್ ಕೇವಲ 5 ಮತ್ತು 6 ರನ್ ಗಳಿಸಿದ್ದು, ಅತ್ಯಂತ ಕೆಟ್ಟ ಹೊಡೆತಗಳನ್ನು ಆಡುವ ಮೂಲಕ ತಮ್ಮ ವಿಕೆಟ್ ಕೈಚೆಲ್ಲಿದ್ದಾರೆ.

ಪಂತ್ ಅವರ ಕಳಪೆ ಫಾರ್ಮ್ ನೋಡಿ ಇದೀಗ ಕೋಚ್ ರಾಹುಲ್ ದ್ರಾವಿಡ್ ಚಿಂತೆ ಕೂಡ ಹೆಚ್ಚಾಗಿದ್ದು, ಹೀಗಾಗಿ ಅವರನ್ನು ಲಯಕ್ಕೆ ತರುವ ಕೆಲಸವನ್ನು ಸ್ವತಃ ಮುಖ್ಯ ಕೋಚ್ ಕೈಗೆತ್ತಿಕೊಂಡಿದ್ದಾರೆ. ರಾಜ್ಕೋಟ್ನಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೂ ಮುನ್ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪಂತ್ನೊಂದಿಗೆ ಸಾಕಷ್ಟು ಸಮಯ ಕಳೆದಿದ್ದರು.

ಪಂತ್ ಅವರು ಶಾಟ್ ಆಯ್ಕೆಯ ಬಗ್ಗೆ ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚಿಸಿದ್ದರು. ಅಷ್ಟೇ ಅಲ್ಲದೆ ದ್ರಾವಿಡ್ ಅವರ ಸಲಹೆಯಂತೆ ತುಂಬಾ ಹೊತ್ತು ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ರಾಹುಲ್ ದ್ರಾವಿಡ್ ಪಂತ್ ಅವರ ತಪ್ಪುಗಳನ್ನು ತಿದ್ದುವ ಪ್ರಯತ್ನವನ್ನು ಮಾಡಿದ್ದರು. ಹೀಗಾಗಿ ನಾಲ್ಕನೇ ಟಿ20 ಪಂದ್ಯದಲ್ಲಿ ರಿಷಭ್ ಪಂತ್ ಮತ್ತೆ ಫಾರ್ಮ್ಗೆ ಮರಳುವ ವಿಶ್ವಾಸದಲ್ಲಿದ್ದಾರೆ.

ಪಂತ್ ಹೊರತಾಗಿ ಶ್ರೇಯಸ್ ಅಯ್ಯರ್ ಕೂಡ ನೆಟ್ಸ್ ನಲ್ಲಿ ಹೆಚ್ಚುವರಿ ಅಭ್ಯಾಸ ನಡೆಸಿದರು. ಈ ಸರಣಿಯಲ್ಲಿ ಶ್ರೇಯಸ್ ಅಯ್ಯರ್ 3 ಪಂದ್ಯಗಳಲ್ಲಿ 30 ಸರಾಸರಿಯಲ್ಲಿ 90 ರನ್ ಗಳಿಸಿದ್ದಾರೆ. ಅಯ್ಯರ್ ಅವರ ಬ್ಯಾಟಿಂಗ್‌ನಲ್ಲಿ ಕಂಡುಬರುವ ಸಮಸ್ಯೆ ಎಂದರೆ ವೇಗದ ಬ್ಯಾಟಿಂಗ್ಗೆ ಒಗ್ಗಿಕೊಳ್ಳದಿರುವುದು. ಹೀಗಾಗಿ ರಾಹುಲ್ ನೇತೃತ್ವದಲ್ಲಿ ಅಯ್ಯರ್ ಕೂಡ ಬಿರುಸಿನ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.