
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತದ ಅದ್ಭುತ ಪ್ರದರ್ಶನ ಮುಂದುವರೆದಿದೆ. ಆಡಿರುವ ಎಲ್ಲ ನಾಲ್ಕು ಪಂದ್ಯಗಳ ಪೈಕಿ ನಾಲ್ಕರಲ್ಲೂ ಗೆದ್ದು ಭರ್ಜರಿ ಫಾರ್ಮ್ನಲ್ಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಳಿಕ ಅಫ್ಘಾನಿಸ್ತಾನ, ಪಾಕಿಸ್ತಾನ, ಗುರುವಾರ ಬಾಂಗ್ಲಾದೇಶ ವಿರುದ್ಧ ಜಯ ಸಾಧಿಸುವ ಮೂಲಕ ವಿಶ್ವಕಪ್ ಪಾಯಿಂಟ್ ಟೇಬಲ್ನಲ್ಲಿ ಒಟ್ಟು ಎಂಟು ಅಂಕ ಸಂಪಾದಿಸಿ ದ್ವಿತೀಯ ಸ್ಥಾನದಲ್ಲಿದೆ.

ಸತತ ನಾಲ್ಕು ಜಯ ಸಾಧಿಸಿರುವ ಭಾರತಕ್ಕೆ ಮುಂದಿನ ಎದುರಾಳಿ ಟೇಬಲ್ ಟಾಪರ್ ನ್ಯೂಝಿಲೆಂಡ್. ರೋಹಿತ್ ಪಡೆ ಬಲಿಷ್ಠ ನ್ಯೂಝಿಲೆಂಡ್ ವಿರುದ್ಧ ಅಕ್ಟೋಬರ್ 22 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೀಸಿಯೇಷನ್ ಸ್ಟೇಡಿಯಂ ತನ್ನ 5ನೇ ಪಂದ್ಯ ಆಡಲಿದೆ. ಇದಾದ ಬಳಿಕ ಆಟಗಾರರಿಗೆ ಬಿಸಿಸಿಐ ಬಂಪರ್ ಆಫರ್ ನೀಡಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ನಂತರ ಕುಟುಂಬದೊಂದಿಗೆ ಮನೆಯಲ್ಲಿ ಸ್ವಲ್ಪ ಸಮಯ ಕಳೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿರಾಮವನ್ನು ನೀಡುವ ಸಾಧ್ಯತೆಯಿದೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.

ವರದಿಯ ಪ್ರಕಾರ, ಎಲ್ಲಾ ಆಟಗಾರರು ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ 2-3 ದಿನಗಳ ವಿರಾಮ ಪಡೆದುಕೊಳ್ಳಲಿದ್ದಾರೆ. ಅಕ್ಟೋಬರ್ 29 ರಂದು ಲಕ್ನೋದಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ ಆಗಲಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಬಳಿಕ ಭಾತದ ಮುಂದಿನ ಪಂದ್ಯಕ್ಕೆ ಏಳು ದಿನಗಳ ಅಂತರವಿದೆ. ಹೀಗಾಗಿ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ.

''ಅಕ್ಟೋಬರ್ 22 ರಂದು ನ್ಯೂಝಿಲೆಂಡ್ ವಿರುದ್ಧ ಪಂದ್ಯವನ್ನು ಆಡಿದ ನಂತರ, ಆಟಗಾರರು ತಮ್ಮ ಮನೆಗಳಿಗೆ ಹಿಂತಿರುಗಿ ಅಕ್ಟೋಬರ್ 26 ರಂದು ಲಕ್ನೋದಲ್ಲಿ ಸೇರಲಿದ್ದಾರೆ. ಎಲ್ಲ ಆಟಗಾರರು ಎರಡು ಅಥವಾ ಮೂರು ದಿನಗಳ ವಿರಾಮ ಪಡೆದುಕೊಳ್ಳಲಿದ್ದಾರೆ," ಎಂದು BCCI ಮೂಲವು PTI ಗೆ ತಿಳಿಸಿದೆ.

ಏಷ್ಯಾಕಪ್ 2023 ರಿಂದ ತಂಡದಲ್ಲಿರುವ ಅನೇಕ ಆಟಗಾರರು ಬಿಡುವಿಲ್ಲದೆ ಕ್ರಿಕೆಟ್ ಆಡುತ್ತಿದ್ದಾರೆ. ಏಷ್ಯಾಕಪ್, ಭಾರತ-ಆಸ್ಟ್ರೇಲಿಯಾ ಮೂರು ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿ ನಂತರ ವಿಶ್ವಕಪ್ ಪ್ರಾರಂಭವಾಯಿತು. ಹೀಗಾಗಿ ಯಾವುದೇ ಆಟಗಾರರಿಗೆ ವಿರಾಮ ಸಿಗಲಿಲ್ಲ. ಇದೀಗ ಒಂದು ವಾರದ ನಡುವೆ ಮೂರು ದಿನಗಳ ವಿಶ್ರಾಂತಿ ಪಡೆಯಲಿದ್ದಾರೆ.

ಇದರ ನಡುವೆ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಿಂದ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಪಾಂಡ್ಯ ಅವರ ಎಡ ಹಿಮ್ಮಡಿಗೆ ಗಾಯವಾಗಿತ್ತು. ಹಾರ್ದಿಕ್ ಅವರು ತಂಡದ ಜೊತೆ ಧರ್ಮಶಾಲಾಗೆ ಪ್ರಯಾಣಿಸುವುದಿಲ್ಲ. ವೈದ್ಯಕೀಯ ಸಹಾಯಕ್ಕಾಗಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಲಿದ್ದಾರೆ.