Updated on: Jun 08, 2023 | 6:52 PM
ಇತ್ತೀಚೆಗೆ ಮುಗಿದ ಐಪಿಎಲ್ 16ನೇ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು 5ನೇ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿ, ಫೈನಲ್ಗೂ ಮುನ್ನವೇ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ನತದೃಷ್ಟ ಕ್ರಿಕೆಟಿಗ ಅಂಬಟಿ ರಾಯುಡು ರಾಜಕೀಯದಲ್ಲಿ ತಮ್ಮ 2ನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.
ಈಗಾಗಲೇ ರಾಜಕೀಯಕ್ಕೆ ಎಂಟ್ರಿಕೊಡುವುದಾಗಿ ಹೇಳಿಕೊಂಡಿದ್ದ ಹಿರಿಯ ಕ್ರಿಕೆಟಿಗ ಅಂಬಟಿ ರಾಯುಡು ಆ ನಿಟ್ಟಿನಲ್ಲಿ ತಮ್ಮ ಕೆಲಸವನ್ನು ಚುರುಕುಗೊಳಿಸಿದ್ದಾರೆ. ಕಳೆದ ತಿಂಗಳು 11ರಂದು ಸಿಎಂ ಜಗನ್ ಅವರನ್ನು ಭೇಟಿಯಾಗಿದ್ದ ಅಂಬಟಿ ರಾಯುಡು ಇತ್ತೀಚೆಗೆ ಮತ್ತೊಮ್ಮೆ ಸಿಎಂ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಗನ್ ಅವರನ್ನು ಭೇಟಿ ಮಾಡಲು ರಾಯುಡು ಗುರುವಾರ ಮಧ್ಯಾಹ್ನ ತಾಡೆಪಲ್ಲಿಯಲ್ಲಿರುವ ಸಿಎಂ ಕ್ಯಾಂಪ್ ಕಚೇರಿಗೆ ಆಗಮನಿಸಿದ್ದರು. ಇಬ್ಬರ ನಡುವೆ ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಯಿತು. ಜಗನ್ ಭೇಟಿಯ ನಂತರ ಅಂಬಟಿ ರಾಯುಡು ಮನೆಗೆ ತೆರಳಿದರು.
ಗುಂಟೂರು ಜಿಲ್ಲೆಯ ಪೊನ್ನೂರಿನ ಅಂಬಟಿ ರಾಯುಡು ಅವರು ವೈಸಿಪಿ ಸೇರಿ ಮುಂದಿನ ಚುನಾವಣೆಯಲ್ಲಿ ಅಲ್ಲಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದೆ. ಈ ಪ್ರಕ್ರಿಯೆಯಲ್ಲಿ ನಿತ್ಯ ಸಿಎಂ ಜಗನ್ ಭೇಟಿಯಾಗುತ್ತಿರುವುದು ವದಂತಿಗೆ ಬಲ ನೀಡುತ್ತಿದೆ. ಆದರೆ, ಅಂಬಟಿ ರಾಯುಡು ಅವರು ಗುಂಟೂರು ಸಂಸದ ಅಥವಾ ಪೊನ್ನೂರು ಶಾಸಕ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.
2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಂಬಟಿ ರಾಯುಡು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಐಪಿಎಲ್ ಫೈನಲ್ ಮುಗಿದ್ದ ಬೆನ್ನಲ್ಲೇ, ಅಂದರೆ ಮೇ 30 ರಂದು ಶೀಘ್ರದಲ್ಲೇ 2ನೇ ಇನ್ನಿಂಗ್ಸ್ ಆರಂಭಿಸಲಿದ್ದೇನೆ ಎಂದು ಅಂಬಟಿ ರಾಯುಡು ಟ್ವೀಟ್ ಮಾಡಿದ್ದರು. ಇದೀಗ ಸಿಎಂ ಜಗನ್ ಅವರನ್ನು ಮತ್ತೆ ಮತ್ತೆ ಭೇಟಿಯಾಗುತ್ತಿರುವುದನ್ನು ನೋಡಿದರೆ ರಾಯುಡು ರಾಜಕೀಯದಲ್ಲಿ ತಮ್ಮ 2ನೇ ಇನ್ನಿಂಗ್ಸ್ ಆರಂಭಿಸುವಂತೆ ತೋರುತ್ತಿದೆ.
ಕಾಪು ಸಮುದಾಯಕ್ಕೆ ಸೇರಿದ ಅಂಬಟಿ ತಿರುಪತಿ ರಾಯುಡು ಅವರು ಈ ಮೊದಲು ಜನಸೇನೆ ಪಕ್ಷವನ್ನು ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಇತ್ತೀಚಿಗೆ ರಾಯಡು ವೈಸಿಪಿ ಕಡೆ ಗಮನ ಹರಿಸಿದಂತೆ ಕಾಣುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ತಿಂಗಳು ಶ್ರೀಕಾಕುಳಂ ಜಿಲ್ಲೆಯ ಮೂಲ್‌ಪೇಟ್ ಬಂದರಿನ ಶಂಕುಸ್ಥಾಪನೆ ಮಾಡಿದ ಸಿಎಂ ವಿಡಿಯೋವನ್ನು ರಿಟ್ವೀಟ್ ಮಾಡಿದಂದಿನಿಂದ ಅಂಬಾಟಿ ವೈಸಿಪಿ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಅಲ್ಲದೆ ರಾಜ್ಯದ ಎಲ್ಲರಿಗೂ ಜಗನ್ ಮೇಲೆ ನಂಬಿಕೆ ಇದೆ ಎಂದು ಅಂಬಾಟಿ ಟ್ವೀಟ್ನಲ್ಲಿ ಬರೆದುಕೊಂಡಿದ್ದರು. ಆ ಟ್ವೀಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೂಡ ನಡೆದಿತ್ತು.