India vs New Zealand, 3rd T20I: ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 168 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡ ಹೊಸ ದಾಖಲೆಯನ್ನೂ ಕೂಡ ನಿರ್ಮಿಸಿದೆ.
ಹೌದು, ಇದು ಟೀಮ್ ಇಂಡಿಯಾ ಪಾಲಿನ ಸರ್ವಶ್ರೇಷ್ಠ ಗೆಲುವಾಗಿದೆ. ಈ ಹಿಂದೆ ಐರ್ಲೆಂಡ್ ವಿರುದ್ಧ 143 ರನ್ಗಳಿಂದ ಜಯ ಸಾಧಿಸಿದ್ದು ಇದುವೆರೆಗಿನ ಭಾರತದ ಭಾರೀ ಅಂತರದ ಗೆಲುವಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು ಟೀಮ್ ಇಂಡಿಯಾ 168 ರನ್ಗಳ ಗೆಲುವಿನ ಹೊಸ ಇತಿಹಾಸ ನಿರ್ಮಿಸಿದೆ.
ಅಷ್ಟೇ ಅಲ್ಲದೆ ಐಸಿಸಿ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ತಂಡವೊಂದರ ವಿರುದ್ಧ ಅತ್ಯಧಿಕ ರನ್ಗಳ ಅಂತರದಿಂದ ಗೆದ್ದ ತಂಡ ಎಂಬ ಹೆಗ್ಗಳಿಕೆ ಭಾರತ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಪಾಕ್ ತಂಡದ ಹೆಸರಿನಲ್ಲಿತ್ತು.
ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ್ ತಂಡವು 143 ರನ್ಗಳಿಂದ ಜಯ ಸಾಧಿಸಿದ್ದು ವಿಶ್ವ ದಾಖಲೆಯಾಗಿತ್ತು. ಇದೀಗ ಪಾಕ್ ತಂಡದ ಈ ದಾಖಲೆಯನ್ನು ಟೀಮ್ ಇಂಡಿಯಾ ಮುರಿದಿದೆ.
ನ್ಯೂಜಿಲೆಂಡ್ ತಂಡವನ್ನು ಕೇವಲ 66 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಟೀಮ್ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ 168 ರನ್ಗಳ ಭರ್ಜರಿ ಜಯ ಸಾಧಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಶುಭ್ಮನ್ ಗಿಲ್ 63 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 12 ಫೋರ್ನೊಂದಿಗೆ ಅಜೇಯ 126 ರನ್ ಬಾರಿಸಿದರೆ, ಬೌಲಿಂಗ್ನಲ್ಲಿ ಹಾರ್ದಿಕ್ ಪಾಂಡ್ಯ 4 ಓವರ್ಗಳಲ್ಲಿ ಕೇವಲ 16 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.