
ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಇಂದಿನಿಂದ (ಜುಲೈ 31) ಶುರುವಾಗಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ ಭಾರತ ತಂಡವು ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಳ್ಳಬಹುದು. ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹೆಚ್ಚುವರಿ ಬ್ಯಾಟರ್ರೊಬ್ಬರನ್ನು ಕಣಕ್ಕಿಳಿಸಲಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಕರುಣ್ ನಾಯರ್ಗೆ ಇಂದು ಕೊನೆಯ ಅವಕಾಶ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಶಾರ್ದೂಲ್ ಠಾಕೂರ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಲಿದ್ದು, ಅವರ ಬದಲಿಗೆ ಕರುಣ್ ಅವರನ್ನು ಕಣಕ್ಕಿಳಿಸಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತಿಸಿದೆ.

ಕರುಣ್ ನಾಯರ್ ಮೊದಲ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 6 ಇನಿಂಗ್ಸ್ಗಳಲ್ಲಿ 249 ಎಸೆತಗಳನ್ನು ಎದುರಿಸಿದ್ದ ಅವರು ಒಟ್ಟು 131 ರನ್ ಮಾತ್ರ ಕಲೆಹಾಕಿದ್ದರು. ಅಂದರೆ ಕೇವಲ 21.83 ಸರಾಸರಿಯಲ್ಲಿ ರನ್ಗಳಿಸಿದ್ದರಿಂದ ಕರುಣ್ ನಾಯರ್ ಅವರನ್ನು ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೈ ಬಿಡಲಾಗಿತ್ತು. ಇದೀಗ ಕೆನ್ನಿಂಗ್ಟನ್ ಓವಲ್ನಲ್ಲಿ ಕನ್ನಡಿಗನಿಗೆ ಮತ್ತೊಮ್ಮೆ ಚಾನ್ಸ್ ನೀಡಲಿದ್ದಾರೆ ಎಂದು ಎಕ್ಸ್ಪ್ರೆಸ್ ಸ್ಪೋರ್ಟ್ಸ್ ವರದಿ ಮಾಡಿದೆ.

ಇತ್ತ ಕರುಣ್ ನಾಯರ್ ಅವರು ಮತ್ತೊಮ್ಮೆ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರೆ, ಕುಲ್ದೀಪ್ ಯಾದವ್ಗೆ ಅವಕಾಶ ಸಿಗುವುದು ಡೌಟ್. ಏಕೆಂದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಕುಲ್ದೀಪ್ ಐದನೇ ಟೆಸ್ಟ್ನಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೀಗ ಕುಲ್ದೀಪ್ ಯಾದವ್ ಬದಲಿಗೆ ಹೆಚ್ಚುವರಿ ಬ್ಯಾಟರ್ನನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

ಇನ್ನು ಜಸ್ಪ್ರೀತ್ ಬುಮ್ರಾ ಬದಲಿಗೆ ಆಕಾಶ್ ದೀಪ್ ಕಣಕ್ಕಿಳಿಯುವುದು ಖಚಿತ. ಹಾಗೆಯೇ ರಿಷಭ್ ಪಂತ್ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಧ್ರುವ್ ಜುರೇಲ್ ಕಾಣಿಸಿಕೊಳ್ಳಲಿದ್ದಾರೆ. ಇದಾಗ್ಯೂ ಅನ್ಶುಲ್ ಕಂಬೋಜ್ ಬದಲಿಗೆ ಯಾರು ಆಡಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಇಲ್ಲಿ ಅರ್ಷದೀಪ್ ಸಿಂಗ್ ಹಾಗೂ ಪ್ರಸಿದ್ಧ್ ಕೃಷ್ಣ ನಡುವೆ ಪೈಪೋಟಿಯಿದ್ದು, ಇವರಲ್ಲಿ ಒಬ್ಬರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
Published On - 8:55 am, Thu, 31 July 25