
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ 15 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಗಾಯಗೊಂಡಿದ್ದ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದು, ಕ್ರಮವಾಗಿ ನಾಯಕ ಮತ್ತು ಉಪನಾಯಕನ ಜವಾಬ್ದಾರಿ ಹೊರಲಿದ್ದಾರೆ. ಇವರೊಂದಿಗೆ ಮೊಹಮ್ಮದ್ ಸಿರಾಜ್ ಕೂಡ ಬಹಳ ದಿನಗಳ ಬಳಿಕ ತಂಡಕ್ಕೆ ಮರಳಿದ್ದಾರೆ.

ಆದರೆ ದೊಡ್ಡ ಸುದ್ದಿಯೆಂದರೆ ಈ ಏಕದಿನ ಸರಣಿಯಿಂದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಡಲಾಗಿದೆ. 2027 ರಲ್ಲಿ ಏಕದಿನ ವಿಶ್ವಕಪ್ ಇರುವಾಗ ಪಾಂಡ್ಯರನ್ನು ಏಕದಿನ ಮಾದರಿಯಿಂದ ಹೊರಗಿಡುವುದು ಹಲವರ ಅಚ್ಚರಿಗೆ ಕಾರಣವಾಗಿತ್ತು. ಆದರೆ ಪಾಂಡ್ಯರನ್ನು ಈ ಸರಣಿಯಿಂದ ಕೈಬಿಡಲು ಬಿಸಿಸಿಐ ಸೂಕ್ತ ಕಾರಣವನ್ನು ವಿವರಿಸಿದೆ.

ಏಕದಿನ ಸರಣಿಗೆ ತಂಡ ಘೋಷಣೆಯ ನಂತರ ತನ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ‘ಹಾರ್ದಿಕ್ ಪಾಂಡ್ಯ ಅವರಿಗೆ ಬಿಸಿಸಿಐ ಸಿಒಇಯಿಂದ 10 ಓವರ್ ಬೌಲಿಂಗ್ ಮಾಡಲು ಅನುಮತಿ ಸಿಗಲಿಲ್ಲ, ಆದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ಹೊರಗಿಡಲಾಗಿದೆ. ಇದಲ್ಲದೆ, ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಅವರ ಕೆಲಸದ ಹೊರೆಯನ್ನು ನಿರ್ವಹಿಸಲಾಗಿದೆ’ ಎಂದಿದೆ.

ಹಾರ್ದಿಕ್ ಪಾಂಡ್ಯ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ವಿರುದ್ಧ ಭರ್ಜರಿ ಶತಕ ಬಾರಿಸಿದ್ದಾರೆ. ಶನಿವಾರ ನಡೆದ ಈ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪಾಂಡ್ಯ 92 ಎಸೆತಗಳಲ್ಲಿ 11 ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳೊಂದಿಗೆ 133 ರನ್ ಗಳಿಸಿದರು.

ಆದರೆ ಹಾರ್ದಿಕ್ ಪಾಂಡ್ಯರ ಈ ಸ್ಫೋಟಕ ಶತಕದ ಹೊರತಾಗಿಯೂ, ಬರೋಡಾ ತಂಡ ವಿದರ್ಭ ವಿರುದ್ಧ ಒಂಬತ್ತು ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ 293 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ವಿದರ್ಭ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಈ ಪಂದ್ಯದಲ್ಲಿ ಪಾಂಡ್ಯ ಎರಡು ಓವರ್‌ಗಳನ್ನು ಬೌಲಿಂಗ್ ಮಾಡಿ 15 ರನ್‌ಗಳನ್ನು ಬಿಟ್ಟುಕೊಟ್ಟರು.

ಏಕದಿನ ಸರಣಿಗೆ ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ಅರ್ಶ್ದೀಪ್ ಸಿಂಗ್ ಮತ್ತು ಯಶಸ್ವಿ ಜೈಸ್ವಾಲ್.