
ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ (Abhishek Sharma) ಅಕ್ಷರಶಃ ಅಬ್ಬರಿಸಿದ್ದರು. ಈ ಅಬ್ಬರದೊಂದಿಗೆ ಅಭಿಷೇಕ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದರು.

ಅರ್ಧಶತಕದ ಬಳಿಕ ಕೂಡ ಆರ್ಭಟ ಮುಂದುವರೆಸಿದ ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 68 ರನ್ ಬಾರಿಸಿದ್ದರು. ಈ ವಿಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿಲ್ಲ ಎಂಬುದು ಅಚ್ಚರಿ.

ಅಂದರೆ ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಲಭಿಸಿದ್ದು ಜಸ್ಪ್ರೀತ್ ಬುಮ್ರಾ ಅವರಿಗೆ. ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ಬುಮ್ರಾ ನೀಡಿದ್ದು ಕೇವಲ 17 ರನ್ ಮಾತ್ರ. ಇದರ ನಡುವೆ 3 ವಿಕೆಟ್ಗಳನ್ನು ಸಹ ಕಬಳಿಸಿದ್ದರು.

ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸುವ ಮೂಲಕ ನ್ಯೂಝಿಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಭಾರತ ತಂಡದ ವೇಗಿಗೆ ನೀಡಲಾಗಿದೆ.

ಇದಾಗ್ಯೂ ಈ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಅಭಿಷೇಕ್ ಶರ್ಮಾ ಮೂರು ಪಂದ್ಯಗಳ ಮೂಲಕ ಒಟ್ಟು 152 ರನ್ ಕಲೆಹಾಕಿದ್ದಾರೆ. ಈ ಭರ್ಜರಿ ಪ್ರದರ್ಶನವನ್ನು ಮುಂದಿನ ಎರಡು ಮ್ಯಾಚ್ಗಳಲ್ಲಿ ಮುಂದುವರೆಸಿದರೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಬಹುದು.