Updated on: Aug 30, 2021 | 4:09 PM
ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತಿಯಾರ್ಧದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಪ್ರವಾಸದ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದ ಸುಂದರ್ ಅವರ ಗಾಯ ಇನ್ನು ಗುಣಮುಖವಾಗಿಲ್ಲ. ಹೀಗಾಗಿ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇತ್ತ ವಾಷಿಂಗ್ಟನ್ ಸುಂದರ್ ಹೊರಗುಳಿಯುತ್ತಿದ್ದಂತೆ ಆರ್ಸಿಬಿ ತಂಡ ಬದಲಿ ಆಟಗಾರನಾಗಿ ಆಕಾಶ್ ದೀಪ್ ಹೆಸರನ್ನು ಘೋಷಿಸಿದೆ. ಅಂದರೆ ಹೊಸ ಆಟಗಾರನ ಆಯ್ಕೆಯ ಬದಲಾಗಿ ತಂಡದಲ್ಲಿದ್ದ ನೆಟ್ ಬೌಲರ್ನನ್ನೇ ಆರ್ಸಿಬಿ ತಂಡ ಆರಿಸಿಕೊಂಡಿದೆ. ಇದರೊಂದಿಗೆ ಯಾರು ಈ ಆಕಾಶ್ ದೀಪ್? ಎಂಬ ಪ್ರಶ್ನೆ ಹಲವರಲ್ಲಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
24 ವರ್ಷದ ಆಕಾಶ್ ದೀಪ್ ಮೂಲತಃ ಬಿಹಾರದ ಆಟಗಾರ. ಆದರೆ ಕ್ರಿಕೆಟ್ ಕೆರಿಯರ್ ಕಂಡುಕೊಂಡಿದ್ದು ಪಶ್ಚಿಮ ಬಂಗಾಳದಲ್ಲಿ ಎಂಬುದು ವಿಶೇಷ. ಕೋಲ್ಕತ್ತಾದಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ ಆಕಾಶ್ರನ್ನು ಮಾಜಿ ಕ್ರಿಕೆಟಿಗ ರಣದೇಬ್ ಬೋಸ್ ಗುರುತಿಸಿದ್ದರು. ಈ ಯುವ ಕ್ರಿಕೆಟಿಗನ ವೇಗವನ್ನು ಗುರುತಿಸಿ ಮಾರ್ಗದರ್ಶನ ನೀಡಿದರು. ಅದರಂತೆ 2018-19ರಲ್ಲಿ ಪಶ್ಚಿಮ ಬಂಗಾಳ ತಂಡಕ್ಕೆ ಆಯ್ಕೆಯಾದರು. ಸೈಯದ್ಯ ಮುಷ್ತಾಕ್ ಅಲಿ ಟೂರ್ನಿ ಮೂಲಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಆಕಾಶ್, ಅದರ ಬೆನ್ನಲ್ಲೇ ರಣಜಿ ತಂಡಕ್ಕೂ ಆಯ್ಕೆಯಾದರು. ಹಿರಿಯರ ತಂಡದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವ ಬಲಗೈ ವೇಗಿ ಉತ್ತಮ ಪ್ರದರ್ಶನ ನೀಡಿದರು. ಪರಿಣಾಮ 2019 ರಲ್ಲಿ ಬಂಗಾಳ ತಂಡವು ರಣಜಿ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿತು.
ಈ ವೇಳೆ ಬಂಗಾಳ ತಂಡದಲ್ಲಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರಿಂದ ಮತ್ತಷ್ಟು ಬೌಲಿಂಗ್ ಪಾಠ ಕಲಿತುಕೊಂಡರು. ಶಮಿ ನೀಡಿದ ಸಲಹೆಗಳು ಆಕಾಶ್ ದೀಪ್ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು. 130 ರ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ವೇಗಿಯು ಆ ಬಳಿಕ 140 ಕ್ಕಿಂತ ಹೆಚ್ಚಿನ ವೇಗದಲ್ಲಿ ಚೆಂಡೆಸೆಯಲು ಪ್ರಾರಂಭಿಸಿದರು. ಅಲ್ಲದೆ ಶಮಿ ನೀಡಿದ ಸಲಹೆಯಂತೆ ಫಿಟ್ನೆಸ್ ಕಾಪಾಡಿಕೊಂಡರು. ಗಾಯದ ಸಮಸ್ಯೆಗಳು ದೂರವಾಗುತ್ತಿದ್ದಂತೆ ಆಯಾಸವಿಲ್ಲದೆ ದೀರ್ಘಾವಧಿಯ ಬೌಲಿಂಗ್ ಮಾಡಲು ಆರಂಭಿಸಿದರು.
ಪರಿಣಾಮ 2019 ರಲ್ಲಿ ಟಿ20 ಪಂದ್ಯಗಳಿಂದ ಆಕಾಶ್ ದೀಪ್ 21 ವಿಕೆಟ್ ಉರುಳಿಸಿದ್ದರು. ಈ ವರ್ಷ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ 4/35 ವಿಕೆಟ್ ಪಡೆದು ಮಿಂಚಿದರು. 2021 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಐದು ಪಂದ್ಯಗಳಿಂದ ಏಳು ವಿಕೆಟ್ ಉರುಳಿಸಿ ಪಶ್ಚಿಮ ಬಂಗಾಳ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಈ ಭರ್ಜರಿ ಪ್ರದರ್ಶನದಿಂದ ಆಕಾಶ್ಗೆ ಐಪಿಎಲ್ ಬಾಗಿಲು ತೆರೆಯಿತು. ಆರ್ಸಿಬಿ ತಂಡಕ್ಕೆ ನೆಟ್ ಬೌಲರ್ ಆಯ್ಕೆಯಾದರು.
ಅದರಂತೆ ಈ ಬಾರಿಯ ಐಪಿಎಲ್ನ ಮೊದಲಾರ್ಧದಲ್ಲಿ ಆಕಾಶ್ ದೀಪ್ ಕೊಹ್ಲಿ, ಎಬಿಡಿ, ಮ್ಯಾಕ್ಸ್ವೆಲ್ ಸೇರಿದಂತೆ ಪ್ರಮುಖ ಆಟಗಾರರಿಗೆ ಚೆಂಡೆಸೆದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಇನ್ನು ಆಕಾಶ್ ದೀಪ್ ಬೌಲರ್ ಆಗಿ ಗುರುತಿಸಿಕೊಂಡಿದ್ದರೂ ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಬಲ್ಲ ಆಟಗಾರ. ಏಕೆಂದರೆ ಈ ಹಿಂದೆ ಬಂಗಾಳದ U-23 ದೇಶೀಯ ಟೂರ್ನಿಯಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಇನ್ನು ದೇಶೀಯ ಕ್ರಿಕೆಟ್ ನಲ್ಲಿ ಪ್ರಬಲ ಬೌಲಿಂಗ್ ಲೈನಪ್ ಹೊಂದಿರುವ ಕರ್ನಾಟಕದ ವಿರುದ್ಧ 44 ರನ್ ಬಾರಿಸಿ ಗಮನ ಸೆಳೆದಿದ್ದರು.
ಈ ಎಲ್ಲಾ ಕಾರಣಗಳಿಂದ ಆರ್ಸಿಬಿ ಕೂಡ ಆಕಾಶ್ ದೀಪ್ ಮೇಲೆ ಕಣ್ಣಿಟ್ಟಿತ್ತು. ಇದೀಗ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹೊರಬೀಳುತ್ತಿದ್ದಂತೆ ಆರ್ಸಿಬಿ ತಂಡ ಉತ್ತಮವಾಗಿ ಬೌಲಿಂಗ್ ಮಾಡಬಲ್ಲ, ಬ್ಯಾಟಿಂಗ್ನಲ್ಲೂ ಮಿಂಚಬಲ್ಲ ಆಟಗಾರ ಆಕಾಶ್ರನ್ನು ಆಯ್ಕೆ ಮಾಡಿಕೊಂಡಿದೆ. ಆ ಮೂಲಕ ಸುಂದರ್ ಸ್ಥಾನದಲ್ಲಿ 24ರ ಹರೆಯದ ಯುವ ಪ್ರತಿಭೆಯನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ. ಅಂದಹಾಗೆ ಆಕಾಶ್ ದೀಪ್ 9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು ಅದರಲ್ಲಿ 35 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 11 ಲೀಸ್ಟ್ ಎ ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದಾರೆ. ಜೊತೆಗೆ 16 ಟಿ20 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ. ಇದೀಗ ಆರ್ಸಿಬಿ ತಂಡದಲ್ಲೂ ಸ್ಥಾನ ಪಡೆಯುವ ಮೂಲಕ 24ರ ಆಕಾಶ್ ದೀಪ್ ಗಮನ ಸೆಳೆದಿದ್ದಾರೆ.