
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಗೆ ಎಲ್ಲ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಇದರ ಸಲುವಾಗಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಲಿಕಾನ್ ಸಿಟಿಗೆ ಬಂದಿಳಿದಿದೆ. ಆಗಸ್ಟ್ 29 ರಂದು ದುಬೈ ಪ್ಲೈಟ್ ಏರಲಿದ್ದಾರೆ.

ಕಳೆದ ಬಾರಿಯ ಪ್ರದರ್ಶನ ಹಾಗೂ ಈ ಸಲದ ಪ್ರದರ್ಶನಗಳ ಒಟ್ಟಾರೆ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಪ್ರಸ್ತುತ ಟಾಪ್ 4 ನಲ್ಲಿರುವ ಮೂರು ತಂಡಗಳೇ ಗೆಲ್ಲುವ ಹಾಟ್ ಫೇವರೇಟ್ ಎನಿಸಿಕೊಂಡಿದೆ. ಅದರಂತೆ ಯುಎಇನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ಬಲಿಷ್ಠ ಎನ್ನಬಹುದು.

ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ, ದೆಹಲಿ (ದೇಶೀಯ ಕ್ರಿಕೆಟ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಒಟ್ಟು 311 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 9929 ರನ್ ಗಳಿಸಿದ್ದಾರೆ. ಇದೇ ವೇಳೆ ಕೊಹ್ಲಿ ಬ್ಯಾಟ್ನಿಂದ 5 ಶತಕ ಮತ್ತು 72 ಅರ್ಧ ಶತಕಗಳು ಮೂಡಿ ಬಂದಿವೆ. ಹಾಗೆಯೇ 879 ಬೌಂಡರಿ ಮತ್ತು 315 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಆರ್ಸಿಬಿಯ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ಜೊತೆ ವಿಮಾನದಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಶನಿವಾರ ಆರ್ಸಿಬಿ (RCB) ತಂಡದಲ್ಲಿ ಸಾಕಷ್ಟು ಅಚ್ಚರಿಯ ಬೆಳವಣೆಗೆ ನಡೆದವು. ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಮೈಕ್ ಹೆಸ್ಸನ್, ಐಪಿಎಲ್ 2021 ಭಾಗ-2ರಲ್ಲಿ ಆರ್ಸಿಬಿ ತಂಡದ ಮುಖ್ಯಕೋಚ್ ಆಗಿ ಕಾರ್ಯನಿರ್ವಹಿಸುವ ಸುದ್ದಿ ಹೊರಬಿತ್ತು.

ಆಡಂ ಜಂಪಾ ಬದಲಿಗೆ ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ತಂಡದಲ್ಲಿ ಪ್ರಮುಖ ಹೊಸ ಆಟಗಾರನಾಗಿ ಸೇರಿಸಿಕೊಳ್ಳಲಾಗಿದೆ.

ಲೆಗ್ ಸ್ಪಿನ್ನರ್ ವನಿಂದು ಹಸರಂಗ ಕಳೆದ ತಿಂಗಳು ಶ್ರೀಲಂಕಾದಲ್ಲಿ ನಡೆದ ಭಾರತ ವಿರುದ್ಧದ ನಿಗದಿತ ಓವರ್ಗಳಲ್ಲಿ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಮೂರು ಟಿ-20 ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ದರು. ಆರ್ಸಿಬಿಗೆ ಹೆಚ್ಚುವರಿ ಲೆಗ್ ಸ್ಪಿನ್ನರ್ ಅವಶ್ಯತೆ ಇದ್ದ ಹಿನ್ನೆಲೆಯಲ್ಲಿ ಹಸರಂಗಗೆ ಮಣೆಹಾಕಿದೆ.

ವನಿಂದು ಹಸರಂಗ ಜೊತೆ ದುಷ್ಮಂತ ಚಮೀರ ಮತ್ತು ಟಿಮ್ ಡೇವಿಡ್ ಈ ಮೂವರು ಆಟಗಾರರನ್ನು ಹೊಸದಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಮುಂದುವರಿಯಲಿರುವ ಐಪಿಎಲ್ ಟೂರ್ನಿಗೆ ತಂಡದಲ್ಲಿದ್ದ ಕೆಲ ಆಟಗಾರರು ಅಲಭ್ಯರಾದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ ಆಟಗಾರನ ಸ್ಥಾನಕ್ಕೆ ಈ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ.
Published On - 10:11 am, Sun, 22 August 21