
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಸೀಸನ್ 15 ಗಾಗಿ ಸಿದ್ಧತೆಗಳು ಆರಂಭವಾಗಿವೆ. ಈಗಾಗಲೇ ಹಳೆಯ 8 ತಂಡಗಳು 27 ಆಟಗಾರರನ್ನು ರಿಟೈನ್ ಮಾಡಿಕೊಂಡು, ಮೆಗಾ ಹರಾಜಿನ ಸಿದ್ದತೆಯಲ್ಲಿದೆ. ಮತ್ತೊಂದೆಡೆ ಹೊಸ 2 ಹೊಸ ತಂಡಗಳು ಆಟಗಾರರ ಆಯ್ಕೆ ಹಾಗೂ ಸಿಬ್ಬಂದಿಗಳ ನೇಮಕದಲ್ಲಿ ನಿರತವಾಗಿದೆ.

ಅದರಂತೆ ಇದೀಗ ಲಕ್ನೋ ಫ್ರಾಂಚೈಸಿ ಜಿಂಬಾಬ್ವೆ ತಂಡದ ಮಾಜಿ ನಾಯಕ ಆಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಿದೆ ಎಂದು ವರದಿಯಾಗಿದೆ. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಆಂಡಿ ಫ್ಲವರ್ ಕೆಲ ದಿನಗಳ ಹಿಂದೆಯಷ್ಟೇ ರಾಜೀನಾಮೆ ನೀಡಿದ್ದರು. ಇದೀಗ ಲಕ್ನೋ ಫ್ರಾಂಚೈಸಿ ಜೊತೆ ಮಾತುಕತೆ ಮುಗಿದಿದ್ದು, ಶೀಘ್ರದಲ್ಲೇ ಹೊಸ ತಂಡದ ಕೋಚ್ ಆಗಿ ನೇಮಕವಾಗಲಿದ್ದಾರೆ ಎಂದು ವರದಿಯಾಗಿದೆ.

ಮತ್ತೊಂದೆಡೆ ಲಕ್ನೋ ತಂಡದ ನಾಯಕನಾಗಿ ಮಾಜಿ ಪಂಜಾಬ್ ಕಿಂಗ್ಸ್ ಆಟಗಾರ ಕೆಎಲ್ ರಾಹುಲ್ ಹೆಸರು ಕೇಳಿ ಬರುತ್ತಿದೆ. ಹೀಗಾಗಿ ಪಂಜಾಬ್ ತಂಡದ ಹಳೆಯ ಸಹಾಯಕ ಕೋಚ್ ಹಾಗೂ ನಾಯಕ ಮತ್ತೆ ಹೊಸ ಫ್ರಾಂಚೈಸಿಯಲ್ಲಿ ಒಂದಾಗಲಿದೆ ಎಂದು ಹೇಳಲಾಗಿದೆ. ಇದಾಗ್ಯೂ ಲಕ್ನೋ ಇದುವರೆಗೆ ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ. ಹೀಗಾಗಿ ಅಂತಿಮ ಕ್ಷಣದಲ್ಲಿ ಕೋಚ್ ಬದಲಾದರೂ ಅಚ್ಚರಿಪಡಬೇಕಿಲ್ಲ.

ಏಕೆಂದರೆ ಹೊಸ ತಂಡಗಳ ಕೋಚ್ ಅಕಾಂಕ್ಷಿಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಹೆಸರು ಕೂಡ ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೆ ಮಾಜಿ ಆರ್ಸಿಬಿ ಆಟಗಾರ ಡೇನಿಯಲ್ ವೆಟ್ಟೋರಿ ಹಾಗೂ ಎಸ್ಆರ್ಹೆಚ್ ತಂಡದ ಮಾಜಿ ಕೋಚ್ ಟ್ರೆವರ್ ಬೇಲಿಸ್ ಕೂಡ ಪಟ್ಟಿಯಲ್ಲಿದ್ದಾರೆ.

ಇದಾಗ್ಯೂ ಲಕ್ನೋ ಫ್ರಾಂಚೈಸಿಯ ಮೊದಲ ಆಯ್ಕೆ ಆಂಡಿ ಫ್ಲವರ್ ಆಗಿದ್ದು, ಹೀಗಾಗಿ ಶೀಘ್ರದಲ್ಲೇ ಆರ್ಪಿಎಸ್ಜಿ ಗ್ರೂಪ್ ಹೊಸ ಕೋಚ್ನ ಘೋಷಣೆ ಮಾಡಲಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ ಅಹಮದಾಬಾದ್ ಫ್ರಾಂಚೈಸಿ ಕೂಡ ಹೊಸ ಕೋಚ್ನ ಹುಡುಕಾಟದಲ್ಲಿದ್ದು, ಹೀಗಾಗಿ ಗ್ಯಾರಿ ಕಸ್ಟರ್ನ್, ಡೇನಿಯಲ್ ವೆಟ್ಟೋರಿ ಅಥವಾ ಟ್ರೆವರ್ ಬೇಲಿಸ್ ಅಹಮದಾಬಾದ್ ತಂಡದ ಕೋಚ್ ಆಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.