
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗೂ ಮುನ್ನ ಹೊಸ ಎರಡು ತಂಡಗಳಿಗೆ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿದೆ. ಅದರಂತೆ ಇದೀಗ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ತಮ್ಮ ನಾಯಕರುಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಈ ವರದಿಯ ಪ್ರಕಾರ, ಲಕ್ನೋ ತಂಡದ ನಾಯಕರಾಗಿ ಕನ್ನಡಿಗ ಕೆಎಲ್ ರಾಹುಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಈಗಾಗಲೇ ರಾಹುಲ್ ಅವರೊಂದಿಗೆ ಲಕ್ನೋ ಫ್ರಾಂಚೈಸಿ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳಲಿದೆ ಎಂದು ತಿಳಿಸಲಾಗಿದೆ.

ಮತ್ತೊಂದೆಡೆ ಅಹಮದಾಬಾದ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್ ಅವರನ್ನು ಸಂಪರ್ಕಿಸಿದ್ದು, ಹೀಗಾಗಿ ಅಯ್ಯರ್ ಕೂಡ ಹೊಸ ತಂಡದ ನಾಯಕನಾಗಿ ಮುಂದಿನ ಸೀಸನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಕೆಎಲ್ ರಾಹುಲ್ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದರೆ, ಶ್ರೇಯಸ್ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ಹೀಗಾಗಿಯೇ ಈ ಇಬ್ಬರನ್ನೇ ಹೊಸ ಫ್ರಾಂಚೈಸಿಗಳು ನಾಯಕರಾಗಿ ಆಯ್ಕೆ ಮಾಡಿಕೊಂಡಿದೆ. ಇದಾಗ್ಯೂ ಹೊಸ ಫ್ರಾಂಚೈಸಿ ಹಾಗೂ ಆಟಗಾರರ ನಡುವೆ ಇನ್ನೂ ಕೂಡ ಯಾವುದೇ ಒಪ್ಪಂದ ನಡೆದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಲಕ್ನೋ ಫ್ರಾಂಚೈಸಿಯ ಎರಡನೇ ಆಯ್ಕೆ ಲೆಗ್ ಸ್ಪಿನ್ನರ್ ರಶೀದ್ ಖಾನ್ ಆಗಿದ್ದು, ಹಾಗೆಯೇ ಮೂರನೇ ಆಟಗಾರನಾಗಿ ಇಶಾನ್ ಕಿಶನ್ ರಾಡಾರ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಲಕ್ನೋ ಕೆಎಲ್ ರಾಹುಲ್, ರಶೀದ್ ಖಾನ್ ಹಾಗೂ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.

ಮತ್ತೊಂದೆಡೆ ಅಹಮದಾಬಾದ್ ಫ್ರಾಂಚೈಸಿಯ ರಾಡಾರ್ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ವಾರ್ನರ್ ಹಾಗೂ ಕ್ವಿಂಟನ್ ಡಿಕಾಕ್ ಹೆಸರುಗಳಿವೆ. ಹೀಗಾಗಿ ಶ್ರೇಯಸ್ ಅಯ್ಯರ್ ಜೊತೆ ಈ ಮೂವರಲ್ಲಿ ಇಬ್ಬರನ್ನು ಆಯ್ಕೆ ಮಾಡಬಹುದು ಎನ್ನಲಾಗಿದೆ.

ಸದ್ಯ ಬಿಸಿಸಿಐ ಹೊಸ ಫ್ರಾಂಚೈಸಿಗಳ ಜೊತೆ ಆಟಗಾರರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳದಂತೆ ತಿಳಿಸಿದೆ. ಏಕೆಂದರೆ ಅಹಮದಾಬಾದ್ ಫ್ರಾಂಚೈಸಿ ಸಿವಿಸಿ ಕಂಪೆನಿಯು ಬೆಟ್ಟಿಂಗ್ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದು, ಹೀಗಾಗಿ ಈ ಫ್ರಾಂಚೈಸಿಯನ್ನು ಐಪಿಎಲ್ನಲ್ಲಿ ಮುಂದುವರೆಸುವುದರ ಬಗ್ಗೆ ಬಿಸಿಸಿಐ ಚರ್ಚೆ ನಡೆಸುತ್ತಿದೆ. ಅಲ್ಲದೆ ಅಂತಿಮ ನಿರ್ಧಾರ ಪ್ರಕಟಿಸುವವರೆಗೆ ಯಾವುದೇ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳದಂತೆ ಹೊಸ ಫ್ರಾಂಚೈಸಿಗಳಿಗೆ ಬಿಸಿಸಿಐ ಸೂಚಿಸಿದೆ.

IPL 2022