
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ದವಾಗಿದೆ. ಈಗಾಗಲೇ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇನ್ನು ಹೊಸ ಎರಡು ಫ್ರಾಂಚೈಸಿಗಳು ತಲಾ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದಾದ ಬಳಿಕ ಬಿಸಿಸಿಐ ಮೆಗಾ ಹರಾಜು ನಡೆಸಲು ನಿರ್ಧರಿಸಿದೆ.

ಈ ಹಿಂದೆ ಮೆಗಾ ಹರಾಜನ್ನು ಜನವರಿ ಮೊದಲ ವಾರದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ಆದರೀಗ ಜನವರಿ 2ನೇ ವಾರದಲ್ಲಿ ಮೆಗಾ ಹರಾಜಿಗಾಗಿ ವೇದಿಕೆ ಸಿದ್ದಪಡಿಸಲು ತೀರ್ಮಾನಿಸಲಾಗಿದೆ. ಏಕೆಂದರೆ ಈ ಹಿಂದೆ ಬಿಸಿಸಿಐ ಹೊಸ ಫ್ರಾಂಚೈಸಿಗಳಿಗೆ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಲು ಡಿಸೆಂಬರ್ 25 ರವರೆಗೆ ಗಡುವು ನೀಡಿತ್ತು.

ಇದರ ಬೆನ್ನಲ್ಲೇ ಅಹಮದಾಬಾದ್ ಫ್ರಾಂಚೈಸಿಯನ್ನು ಖರೀದಿಸಿದ CVC ಕ್ಯಾಪಿಟಲ್ ಪಾರ್ಟ್ನರ್ಸ್ ಮಾಲೀಕತ್ವವನ್ನು ಅಪಸ್ವರಗಳು ಕೇಳಿ ಬಂದಿದ್ದವು. ಈ ಕಂಪೆನಿಯು ಬೆಟ್ಟಿಂಗ್ ಕಂಪನಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಕಾರಣ ಸಿವಿಸಿ ಮಾಲೀಕತ್ವನ್ನು ರದ್ದುಪಡಿಸಬೇಕೆಂಬ ಆಗ್ರಹಗಳು ಕೇಳಿಬಂದಿತ್ತು. ಇದೀಗ ಈ ಬಗ್ಗೆ ಚರ್ಚೆ ನಡೆಸಿರುವ ಬಿಸಿಸಿಐ, ಸಿವಿಸಿ ಕ್ಯಾಪಿಟಲ್ ಮಾಲೀಕರನ್ನೇ ಮುಂದುವರೆಸಲು ನಿರ್ಧರಿಸಲಾಗಿದೆ.

ಆದರೆ ಇತ್ತ ಸಿವಿಸಿ ಮಾಲೀಕತ್ವದ ಬಗ್ಗೆ ಬಿಸಿಸಿಐ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ವಿಳಂಬವಾಗಿದ್ದು, ಹೀಗಾಗಿ ಹೊಸ ತಂಡವು ಇದುವರೆಗೆ ಮೆಗಾ ಹರಾಜಿನ ಸಿದ್ದತೆಗಳನ್ನು ಶುರು ಮಾಡಿರಲಿಲ್ಲ. ಇದೀಗ ಸಿವಿಸಿ ಕ್ಯಾಪಿಟಲ್ ಕಂಪೆನಿಯೇ ಅಹಮದಾಬಾದ್ ಫ್ರಾಂಚೈಸಿಯನ್ನು ಹೊಂದಲಿದೆ ಎಂಬುದನ್ನು ಬಿಸಿಸಿಐ ದೃಢಪಡಿಸಿದೆ ಎಂದು ವರದಿಯಾಗಿದೆ.

ಹೀಗಾಗಿ ಹೊಸ ಫ್ರಾಂಚೈಸಿಗಳಿಗೆ ಅನುಕೂಲವಾಗುವಂತೆ ಮೆಗಾ ಹರಾಜನ್ನು ಒಂದು ವಾರಕ್ಕೆ ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ಅಷ್ಟೇ ಅಲ್ಲದೆ ಹೊಸ ಫ್ರಾಂಚೈಸಿಗಳಿಗೆ 6 ಆಟಗಾರರ ಆಯ್ಕೆಗೆ ನೀಡಲಾದ ಗಡುವನ್ನು ಡಿಸೆಂಬರ್ 25 ರಿಂದ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗುತ್ತದೆ ಎಂದು ವರದಿಯಾಗಿದೆ.

ಅದರಂತೆ ಮೆಗಾ ಹರಾಜು ಕೂಡ ಒಂದು ವಾರ ಮುಂದೂಡಲ್ಪಡಲಿದ್ದು, ಜನವರಿ ಮೊದಲ ವಾರದ ಬದಲಿಗೆ ಜನವರಿ 2ನೇ ವಾರದಲ್ಲಿ ಐಪಿಎಲ್ ಸೀಸನ್ 15 ಗಾಗಿ ಮೆಗಾ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.