
ಐಪಿಎಲ್ ಸೀಸನ್ 15 ಆರಂಭಿಕ ಪಂದ್ಯಗಳಿಗೆ ಆಸ್ಟ್ರೇಲಿಯಾ ಆಟಗಾರರು ಗೈರಾಗುವುದು ಬಹುತೇಕ ಖಚಿತವಾಗಿದೆ. ಆಸ್ಟ್ರೇಲಿಯಾ ತಂಡವು ಮಾರ್ಚ್-ಏಪ್ರಿಲ್ ನಡುವೆ ಪಾಕಿಸ್ತಾನ್ ವಿರುದ್ದ ಸರಣಿ ಆಡಲಿದೆ. ಇದಾಗ್ಯೂ ಕೆಲ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದರೀಗ ಕ್ರಿಕೆಟ್ ಆಸ್ಟ್ರೇಲಿಯಾ ಪಾಕ್ ವಿರುದ್ದದ ಸರಣಿ ಮುಗಿಯುವವರೆಗೆ ತಂಡದಿಂದ ಹೊರಗುಳಿದಿರುವ ಆಟಗಾರರಿಗೂ ಅನುಮತಿ ನೀಡುವುದು ಅನುಮಾನ.

ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಈ ಬಗ್ಗೆ ಚರ್ಚೆ ನಡೆಸಿದ್ದು, ಇದೇ ವೇಳೆ ವಿಶ್ರಾಂತಿಯ ಕಾರಣ ನೀಡಿ ತಂಡದಿಂದ ಹೊರಗುಳಿದಿರುವ ಆಟಗಾರರಿಗೆ ಏಪ್ರಿಲ್ 6 ರವರೆಗೆ ಯಾವುದೇ ಟೂರ್ನಿಯಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲು ಮುಂದಾಗಿದೆ. ಅದರಂತೆ ಇದೀಗ ಪಾಕ್ ವಿರುದ್ದದ ಸರಣಿಯಿಂದ ಹೊರಗುಳಿದಿರುವ ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಹ್ಯಾಝಲ್ವುಡ್ ಸೇರಿದಂತೆ ಕೆಲ ಆಟಗಾರರು ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಇದಾಗ್ಯೂ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದದಲ್ಲಿ ಒಳಪಡದ ಆಸೀಸ್ ಆಟಗಾರರಿಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅದರಂತೆ ಈ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಒಪ್ಪಂದ ಪಡೆಯದ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಬಹುದಾಗಿದೆ. ಇದರಿಂದ ಹೆಚ್ಚಿನ ಅನುಕೂಲವಾಗಿರುವುದು ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಬುದು ವಿಶೇಷ.

ಏಕೆಂದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಮೂವರು ಆಸ್ಟ್ರೇಲಿಯಾ ಆಟಗಾರರು ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಗಿನ ಒಪ್ಪಂದ ಹೊಂದಿಲ್ಲ. ಹೀಗಾಗಿ ಈ ಮೂವರು ಆಟಗಾರರು ಐಪಿಎಲ್ನ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಐಪಿಎಲ್ ಆರಂಭದಿಂದಲೇ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಆಸ್ಟ್ರೇಲಿಯಾ ಆಟಗಾರರು ಯಾರೆಲ್ಲಾ ನೋಡೋಣ...

ಡೇನಿಯಲ್ ಸ್ಯಾಮ್ಸ್ - (ಆಲ್ರೌಂಡರ್) ಮುಂಬೈ ಇಂಡಿಯನ್ಸ್

ರಿಲೆ ಮೆರೆಡಿತ್ - (ಬೌಲರ್) ಮುಂಬೈ ಇಂಡಿಯನ್ಸ್

ಟಿಮ್ ಡೇವಿಡ್ - (ಬ್ಯಾಟರ್) ಮುಂಬೈ ಇಂಡಿಯನ್ಸ್