
ಐಪಿಎಲ್ ಸೀಸನ್ 15 ರಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ. ಪ್ರಸ್ತುತ ಇರುವ 8 ಫ್ರಾಂಚೈಸಿಗಳ ಜೊತೆ ಹೊಸದಾಗಿ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ಸೇರ್ಪಡೆಯಾಗಿದೆ. ಈ ಎರಡು ತಂಡಗಳ ಹರಾಜಿನಿಂದ ಬಿಸಿಸಿಐ ನಿರೀಕ್ಷೆಗೂ ಮೀರಿದ ಆದಾಯಗಳಿಸಿದೆ.

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಐಪಿಎಲ್ ತಂಡಗಳ ಹರಾಜಿನಲ್ಲಿ ಒಟ್ಟು 9 ಸಂಸ್ಥೆಗಳು ಬಿಡ್ಡಿಂಗ್ ನಡೆಸಿದ್ದವು. ಅಂತಿಮವಾಗಿ ಆರ್ಪಿ-ಸಂಜಯ್ ಗೋಯೆಂಕಾ ಗ್ರೂಪ್ ಸಂಸ್ಥೆ 7,090 ಕೋಟಿ ರೂ. ಹರಾಜು ಮೊತ್ತಕ್ಕೆ ಲಕ್ನೋ ತಂಡವನ್ನ ತನ್ನದಾಗಿಸಿಕೊಂಡಿತು.

ಇನ್ನೊಂದೆಡೆ ಸಿವಿಸಿ ಕ್ಯಾಪಿಟಲ್ಸ್ ಕಂಪೆನಿಯು ಅಹಮದಾಬಾದ್ ತಂಡದ ಖರೀದಿಗಾಗಿ ಭರ್ಜರಿ ಪೈಪೋಟಿ ನಡೆಸಿತ್ತು. ಅದರಂತೆ ಅಂತಿಮವಾಗಿ 5625 ಕೋಟಿ ರೂ. ನೀಡಿ ಅಹಮದಾಬಾದ್ ತಂಡವನ್ನು ಖರೀದಿಸಿತು.

ಈ ಹಿಂದೆ ಹೊಸ ಎರಡು ತಂಡಗಳ ಮಾರಾಟದಿಂದ ಬಿಸಿಸಿಐ 10 ಸಾವಿರ ಕೋಟಿ ರೂ. ಆದಾಯಗಳಿಸುವ ಇರಾದೆಯಲ್ಲಿತ್ತು. ಆದರೆ ಈ ಹರಾಜಿನಲ್ಲಿನ ಪೈಪೋಟಿಯಿಂದಾಗಿ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ. ಅದರಂತೆ ಎರಡು ಹೊಸ ತಂಡಗಳ ಮಾರಾಟದಿಂದ ಬಿಸಿಸಿಐ ಗಳಿಸಿದ್ದು ಬರೋಬ್ಬರಿ 12,715 ಕೋಟಿ. ರೂ.

ಇನ್ನು ಸಂಜೀವ್ ಗೋಯೆಂಕಾ ಅವರ ತಂಡವು ಲಕ್ನೋನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ ಅನ್ನು ಕೇಂದ್ರೀಕರಿಸಿ ಐಪಿಎಲ್ನಲ್ಲಿ ಕಣಕ್ಕಿಳಿಯಲಿದೆ. ಹಾಗೆಯೇ ಅಹದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಅನ್ನು ಕೇಂದ್ರೀಕರಿಸಿ ಸಿವಿಸಿ ಮಾಲಕತ್ವದ ತಂಡ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದೆ.
Published On - 9:43 pm, Mon, 25 October 21