Updated on: Mar 23, 2022 | 5:32 PM
ಇಂಡಿಯನ್ ಪ್ರೀಮಿಯರ್ ಲೀಗ್ 2022 ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಇದರೊಂದಿಗೆ 15ನೇ ಸೀಸನ್ ಐಪಿಎಲ್ಗೆ ಚಾಲನೆ ದೊರೆಯಲಿದೆ. ಆದರೆ ಕಳೆದ 14 ಸೀಸನ್ ಐಪಿಎಲ್‌ನಲ್ಲಿ ನಿರ್ಮಾಣವಾಗಿರುವ ಕೆಲವೊಂದು ಕಳಪೆ ದಾಖಲೆಗಳನ್ನು ನೋಡಿದ್ರೆ ನೀವು ಖಂಡಿತವಾಗಿಯೂ ಅಚ್ಚರಿಪಡ್ತೀರಾ. ಅಂತಹ ದಾಖಲೆಗಳು ಈ ಕೆಳಗಿನಂತಿವೆ...
ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ಎಂಬುದರಲ್ಲಿ ಡೌಟೇ ಇಲ್ಲ. ಹಿಟ್ಮ್ಯಾನ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಚಾಂಪಿಯನ್ ಆಗಿದೆ. ಆದರೆ ಬ್ಯಾಟ್ಸ್‌ಮನ್ ಆಗಿ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅತ್ಯಂತ ಕೆಟ್ಟ ದಾಖಲೆಯನ್ನು ಹೊಂದಿದ್ದಾರೆ. ಅದೆಂದರೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ 10ಕ್ಕಿಂತ ಕಡಿಮೆ ಮೊತ್ತಕ್ಕೆ ಔಟಾಗಿರುವ ಬ್ಯಾಟ್ಸ್‌ಮನ್ ಎಂಬ ಹೀನಾಯ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ.
ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 60 ಬಾರಿ 10 ಕ್ಕಿಂತ ಕಡಿಮೆ ಮೊತ್ತಕ್ಕೆ ಔಟಾಗಿದ್ದಾರೆ. ಅಂದರೆ 0 ಟು 9 ರನ್‌ಗಳ ಒಳಗೆ ಔಟಾಗಿ ಅತೀ ಹೆಚ್ಚು ಬಾರಿ ಎರಡಂಕಿ ಮುಟ್ಟದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಕೂಡ 60 ಬಾರಿ 10 ರನ್ಗಳೊಳಗೆ ಔಟಾಗುವ ಮೂಲಕ ರೋಹಿತ್ ಶರ್ಮಾ ಜೊತೆ ಸಮಬಲದಲ್ಲಿದ್ದಾರೆ. ಮತ್ತೊಂದೆಡೆ ಸುರೇಶ್ ರೈನಾ 53 ಬಾರಿ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ.
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಒಮ್ಮೆ ಮಾತ್ರ 50 ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಸೋತಿದೆ. ಅಂದರೆ ಐಪಿಎಲ್‌ನಲ್ಲಿ ಸಿಎಸ್ಕೆ ತಂಡವನ್ನು ಹೀನಾಯವಾಗಿ ಸೋಲಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವಿದ್ದು, ಎಸ್ಆರ್ಹೆಚ್ ಕೇವಲ 3 ಪಂದ್ಯಗಳಲ್ಲಿ 50 ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಸೋತಿದೆ.
ಆದರೆ ಆರ್‌ಸಿಬಿ ತಂಡವು ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಸೋತಿದೆ. ಈ ಮೂಲಕ ಐಪಿಎಲ್‌ನಲ್ಲಿ ಅತೀ ಹೆಚ್ಚು ಹೀನಾಯ ಸೋಲುಂಡ ತಂಡ ಎಂಬ ಕಳಪೆ ದಾಖಲೆ ಕೂಡ ಆರ್‌ಸಿಬಿ ಹೆಸರಿನಲ್ಲಿದೆ.
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ