
IPL 2023 GT vs CSK: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಚಾಲನೆ ಸಿಕ್ಕಿದೆ. ಅಹಮದಾಬಾದ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ 5 ವಿಕೆಟ್ಗಳಿಂದ ಸೋಲುಣಿಸಿ ಗುಜರಾತ್ ಟೈಟಾನ್ಸ್ ತಂಡವು ಶುಭಾರಂಭ ಮಾಡಿದೆ. ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಂದ 6 ದಾಖಲೆಗಳು ನಿರ್ಮಾಣವಾಗಿರುವುದು ವಿಶೇಷ.

ಹಾಗಿದ್ರೆ ಐಪಿಎಲ್ ಸೀಸನ್ 16 ರ ಮೊದಲ ಪಂದ್ಯದಲ್ಲಿ ನಿರ್ಮಾಣವಾದಂತಹ ದಾಖಲೆಗಳು ಯಾವುವು ಎಂದು ನೋಡೋಣ...

1- ವೇಗದ ಅರ್ಧಶತಕ: ಈ ಪಂದ್ಯದಲ್ಲಿ ಸಿಎಸ್ಕೆ ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ 50 ಎಸೆತಗಳಲ್ಲಿ 92 ರನ್ ಬಾರಿಸಿದ್ದರು. ವಿಶೇಷ ಎಂದರೆ ಯುವ ಬ್ಯಾಟರ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದರೊಂದಿಗೆ ಸಿಎಸ್ಕೆ ಪರ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ ಮೂರನೇ ಆರಂಭಿಕ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಮ್ಯಾಥ್ಯೂ ಹೇಡನ್ ಹಾಗೂ ಡ್ವೇನ್ ಸ್ಮಿತ್ ಸಿಎಸ್ಕೆ ಪರ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

2- 100 ವಿಕೆಟ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೆ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಶಮಿ ಐಪಿಎಲ್ನಲ್ಲಿ 100 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ ಈ ಮೈಲುಗಲ್ಲು ದಾಟಿದ 19ನೇ ಬೌಲರ್ ಎನಿಸಿಕೊಂಡಿದ್ದಾರೆ.

3- 200 ಸಿಕ್ಸ್: ಸಿಎಸ್ಕೆ ಪರ 200 ಸಿಕ್ಸ್ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಈ ಪಂದ್ಯದ ಮೂಲಕ ಮಹೇಂದ್ರ ಸಿಂಗ್ ಧೋನಿ ನಿರ್ಮಿಸಿದ್ದಾರೆ. ಜೋಶ್ ಲಿಟಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಧೋನಿ ಈ ಸಾಧನೆ ಮಾಡಿದರು. ಧೋನಿಯನ್ನು ಹೊರತುಪಡಿಸಿ ಮತ್ಯಾವುದೇ ಬ್ಯಾಟರ್ ಸಿಎಸ್ಕೆ ಪರ 200 ಸಿಕ್ಸ್ ಬಾರಿಸಿಲ್ಲ ಎಂಬುದು ವಿಶೇಷ.

4- ಹಿರಿಯ ವಿಕೆಟ್ ಕೀಪರ್: ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ವಿಕೆಟ್ ಕೀಪಿಂಗ್ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನು ಧೋನಿ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಆ್ಯಡಂ ಗಿಲ್‌ಕ್ರಿಸ್ಟ್ ಹೆಸರಿನಲ್ಲಿತ್ತು. ಗಿಲ್‌ಕ್ರಿಸ್ಟ್ ಅವರನ್ನು 41 ವರ್ಷ ಮತ್ತು 185 ದಿನಗಳಿರುವಾಗ ಪಂಜಾಬ್ ಕಿಂಗ್ಸ್ ಪರ ಕೊನೆಯ ಪಂದ್ಯವಾಡಿದ್ದರು. ಇದೀಗ 41 ವರ್ಷ 267 ದಿನಗಳ ವಯಸ್ಸಿನಲ್ಲಿ ವಿಕೆಟ್ ಕೀಪಿಂಗ್ ಮಾಡುವ ಮೂಲಕ ಧೋನಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

5- ಮೊದಲ ವಿಕೆಟ್: ಐಪಿಎಲ್ ಇತಿಹಾಸದಲ್ಲಿ ಮೊದಲ ವಿಕೆಟ್ ಐರ್ಲೆಂಡ್ ಬೌಲರ್ ಎಂಬ ಹೆಗ್ಗಳಿಕೆಗೆ ಜೋಶ್ ಲಿಟಲ್ ಪಾತ್ರರರಾಗಿದ್ದಾರೆ. ಸಿಎಸ್ಕೆ ತಂಡದ ಅಂಬಾಟಿ ರಾಯುಡು ವಿಕೆಟ್ ಕಬಳಿಸುವ ಮೂಲಕ ಲಿಟಲ್ ಈ ಸಾಧನೆ ಮಾಡಿದ್ದಾರೆ.

6- ಹಿರಿಯ ನಾಯಕ: ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ಟಾಸ್ಗೆ ಆಗಮಿಸುವ ಮೂಲಕ ಐಪಿಎಲ್ನಲ್ಲಿ ಕಣಕ್ಕಿಳಿದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆಯನ್ನು ಧೋನಿ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಐಪಿಎಲ್ನ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆ ಶೇನ್ ವಾರ್ನ್ ಹೆಸರಿನಲ್ಲಿತ್ತು. 2011 ರಲ್ಲಿ ವಾರ್ನ್ ತಮ್ಮ 41ನೇ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಈ ದಾಖಲೆಯನ್ನು ಧೋನಿ (41 ವರ್ಷ 267 ದಿನಗಳು) ಮುರಿದಿದ್ದಾರೆ.