
IPL 2023: ಐಪಿಎಲ್ನ 25ನೇ ಪಂದ್ಯವು ನಾನಾ ಕಾರಣಗಳಿಂದ ಗಮನ ಸೆಳೆದಿದೆ. ಈ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಕ್ಯಾಮರೋನ್ ಗ್ರೀನ್ ಚೊಚ್ಚಲ ಅರ್ಧಶತಕ ಬಾರಿಸಿದರೆ, ಅರ್ಜುನ್ ತೆಂಡೂಲ್ಕರ್ ಮೊದಲ ವಿಕೆಟ್ ಪಡೆದು ಸಂಭ್ರಮಿಸಿದರು. ಅದು ಕೂಡ ಕೊನೆಯ ಓವರ್ನಲ್ಲಿ ಈ ಸಾಧನೆ ಮಾಡಿದ್ದು ವಿಶೇಷ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತ್ತು. ಈ ಕಠಿಣ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೊನೆಯ ಓವರ್ನಲ್ಲಿ 20 ರನ್ಗಳ ಅವಶ್ಯಕತೆಯಿತ್ತು.

ಈ ವೇಳೆ ನಾಯಕ ರೋಹಿತ್ ಶರ್ಮಾ ಚೆಂಡನ್ನು ಯುವ ವೇಗಿ ಅರ್ಜುನ್ ತೆಂಡೂಲ್ಕರ್ ಕೈಗೆ ನೀಡಿದರು. ಮೊದಲ ಎಸೆತದಲ್ಲಿ ಯಾವುದೇ ರನ್ ನೀಡದ ಅರ್ಜುನ್ 2ನೇ ಎಸೆತದಲ್ಲಿ 1 ರನ್ ಮಾತ್ರ ನೀಡಿದ್ದರು. ಇನ್ನು ಮೂರನೇ ಎಸೆತವನ್ನು ವೈಡ್ ಎಸೆದರೂ, ಮರು ಎಸೆತದಲ್ಲಿ ಕೇವಲ 2 ರನ್ ನೀಡಿದರು.

ಇನ್ನು 4ನೇ ಎಸೆತದಲ್ಲಿ 1 ರನ್. 5ನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಪಡೆಯುವ ಮೂಲಕ ಅರ್ಜುನ್ ತೆಂಡೂಲ್ಕರ್ ಚೊಚ್ಚಲ ಐಪಿಎಲ್ ವಿಕೆಟ್ ಪಡೆದರು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ 14 ರನ್ಗಳಿಂದ ಜಯ ಸಾಧಿಸಿತು.

ಈ ಪಂದ್ಯದಲ್ಲಿ 2.5 ಓವರ್ ಬೌಲಿಂಗ್ ಮಾಡಿದ್ದ ಅರ್ಜುನ್ ತೆಂಡೂಲ್ಕರ್ 18 ರನ್ ನೀಡಿ 1 ವಿಕೆಟ್ ಕಬಳಿಸಿದರು. ಈ ವಿಕೆಟ್ನೊಂದಿಗೆ ಐಪಿಎಲ್ನಲ್ಲಿ ಸಚಿನ್ ತೆಂಡೂಲ್ಕರ್ಗೆ ಸಾಧ್ಯವಾಗದಿರುವುದನ್ನು ಅರ್ಜುನ್ ಸಾಧಿಸಿದರು.

ಹೌದು, ಐಪಿಎಲ್ನಲ್ಲಿ 78 ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 4 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 36 ಎಸೆತಗಳನ್ನು ಎಸೆದರೂ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಇದೀಗ ಅರ್ಜುನ್ ತೆಂಡೂಲ್ಕರ್ ತಮ್ಮ 2ನೇ ಪಂದ್ಯದಲ್ಲಿ ಮೊದಲ ವಿಕೆಟ್ ಕಬಳಿಸುವ ಮೂಲಕ ಐಪಿಎಲ್ ವಿಕೆಟ್ ಖಾತೆ ತೆರೆದಿದ್ದಾರೆ.

ಇತ್ತ ಮಗನಿಗೆ ವಿಕೆಟ್ ಸಿಕ್ಕ ಖುಷಿಯಲ್ಲಿ ಸಚಿನ್ ತೆಂಡೂಲ್ಕರ್ ಕೂಡ, ಕೊನೆಗೂ ತೆಂಡೂಲ್ಕರ್ ಐಪಿಎಲ್ ವಿಕೆಟ್ ಪಡೆದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.