ಐಪಿಎಲ್ ಸೀಸನ್ 16 ಮಿನಿ ಹರಾಜಿಗಾಗಿ ಸಿದ್ದತೆಗಳು ಶುರುವಾಗಿದೆ. ಈ ಬಾರಿಯ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಆದರೆ ಈ ಆಟಗಾರರ ಪಟ್ಟಿಯಲ್ಲಿ ಭಾರತದ ಇಬ್ಬರು ಕ್ರಿಕೆಟಿಗರ ಹೆಸರಿಲ್ಲ ಎಂಬುದು ವಿಶೇಷ.
ಅಂದರೆ ಈ ಬಾರಿಯ ಮಿನಿ ಹರಾಜಿಗಾಗಿ ಟೀಮ್ ಇಂಡಿಯಾ ಪರ ಆಡಿದ ಒಟ್ಟು 19 ಆಟಗಾರರು ಹೆಸರು ನೀಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿಲ್ಲ. ಆ ಆಟಗಾರರು ಯಾರೆಂದರೆ...
ಚೇತೇಶ್ವರ ಪೂಜಾರ: ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಚೇತೇಶ್ವರ ಪೂಜಾರ ಐಪಿಎಲ್ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಯಲು ಅವಕಾಶ ಸಿಕ್ಕರಲಿಲ್ಲ. ಅಷ್ಟೇ ಅಲ್ಲದೆ ಕಳೆದ ಸೀಸನ್ನಲ್ಲಿ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.
ಅಂದರೆ 2021 ರಲ್ಲಿ ಸಿಎಸ್ಕೆ ತಂಡದಲ್ಲಿದ್ದರೂ ಚೇತೇಶ್ವರ ಪೂಜಾರ ಕೊನೆಯ ಬಾರಿಗೆ ಐಪಿಎಲ್ ಪಂದ್ಯ ಆಡಿದ್ದು 2014 ರಲ್ಲಿ. ಅಲ್ಲದೆ ಇದುವರೆಗೆ 30 ಐಪಿಎಲ್ ಪಂದ್ಯಗಳನ್ನಾಡಿರುವ ಪೂಜಾರ 20.52 ಸರಾಸರಿಯಲ್ಲಿ 390 ರನ್ ಗಳಿಸಿದ್ದಾರೆ.
ಇದಾಗ್ಯೂ ಈ ವರ್ಷ ಇಂಗ್ಲೆಂಡ್ನಲ್ಲಿ ನಡೆದ ರಾಯಲ್ ಲಂಡನ್ ಕಪ್ನಲ್ಲಿ 8 ಪಂದ್ಯಗಳಿಂದ 614 ರನ್ ಬಾರಿಸಿ ಅಬ್ಬರಿಸಿದ್ದರು. ಹೀಗಾಗಿಯೇ ಪೂಜಾರ ಈ ಬಾರಿ ಐಪಿಎಲ್ಗೆ ಹೆಸರು ನೀಡುವ ನಿರೀಕ್ಷೆಯಿತ್ತು. ಆದರೆ ಐಪಿಎಲ್ ಸೀಸನ್ 16 ಬಿಡ್ಡಿಂಗ್ಗಾಗಿ ಪೂಜಾರ ಹೆಸರು ನೀಡದೇ ಅಚ್ಚರಿ ಮೂಡಿಸಿದ್ದಾರೆ.
ಹನುಮ ವಿಹಾರಿ: 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಹನುಮ ವಿಹಾರಿ ಆ ಬಳಿಕ ಐಪಿಎಲ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ಈ ಬಾರಿ ಕೂಡ ಶ್ರೀಮಂತ ಕ್ರಿಕೆಟ್ ಲೀಗ್ನ ಹರಾಜಿಗಾಗಿ ವಿಹಾರಿ ಹೆಸರು ನೀಡಿಲ್ಲ.
ಐಪಿಎಲ್ನಲ್ಲಿ ಇದುವರೆಗೆ 24 ಪಂದ್ಯಗಳನ್ನು ಆಡಿರುವ ಹನುಮ ವಿಹಾರಿ ಕೇವಲ 284 ರನ್ಗಳಿಸಿದ್ದಾರೆ. ಇತ್ತ ಟೆಸ್ಟ್ ಕ್ರಿಕೆಟ್ನತ್ತ ಗಮನ ಕೇಂದ್ರೀಕರಿಸಿರುವ ವಿಹಾರಿ, ಮಿನಿ ಹರಾಜಿನಿಂದ ಹೊರಗುಳಿಯಲು ಇದು ಕೂಡ ಒಂದು ಕಾರಣವಾಗಿರಬಹುದು.