
ಚುಟುಕು ಕ್ರಿಕೆಟ್ ಕದನ ಐಪಿಎಲ್ ಸೀಸನ್ 16 ರಂಗೇರಲು ಇನ್ನು ದಿನಗಳು ಮಾತ್ರ ಉಳಿದಿವೆ. ಇತ್ತ ಆರ್ಸಿಬಿ ಅಭಿಮಾನಿಗಳು ಈ ಸಲ ಕಪ್ ನಮ್ದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಇದರ ನಡುವೆ ಈ ಬಾರಿಯ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುವವರು ಯಾರು ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಯ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ನೀಡಿರುವ ಹೇಳಿಕೆಯು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಹೌದು, ಭಾರತ ತಂಡದ ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಆರ್ಸಿಬಿ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆದರೆ ಅದು ಕಪ್ ಗೆಲ್ಲುತ್ತೆ ಎಂದಲ್ಲ, ಬದಲಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಾಪ್-3 ಗೂ ಪ್ರವೇಶಿಸುವುದಿಲ್ಲ ಎಂದಿದ್ದಾರೆ.

ಆರ್ಸಿಬಿ ಉತ್ತಮ ತಂಡವನ್ನೇ ಹೊಂದಿದೆ. ಆದರೆ ಹೋಮ್ ಗ್ರೌಂಡ್ನಲ್ಲಿ ಆಡವುದು ಆರ್ಸಿಬಿಗೆ ಸಮಸ್ಯೆಯನ್ನು ಉಂಟು ಮಾಡಲಿದೆ. ಇದುವೇ ತಂಡಕ್ಕೆ ವಿಭಿನ್ನ ರೀತಿಯ ಸವಾಲಾಗಿರುತ್ತದೆ. ಹೀಗಾಗಿ ಈ ಬಾರಿ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ 4 ರಿಂದ 6 ರ ನಡುವೆ ಸ್ಥಾನ ಪಡೆದು ಟೂರ್ನಿಯನ್ನು ಅಂತ್ಯಗೊಳಿಸಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಆರ್ಸಿಬಿ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರಾ, ಜೋಶ್ ಹ್ಯಾಝಲ್‌ವುಡ್ ಐಪಿಎಲ್‌ನಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಖಚಿತತೆ ಇಲ್ಲ. ಇದೊಂದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಹ್ಯಾಝಲ್‌ವುಡ್ ಇಲ್ಲದಿದ್ದರೆ ಆರ್ಸಿಬಿ ಬೌಲಿಂಗ್ ವಿಭಾಗವು ಅತ್ಯಂತ ದುರ್ಬಲವಾಗಲಿದೆ ಎಂದು ಚೋಪ್ರಾ ಹೇಳಲಿದ್ದಾರೆ.

ಒಟ್ಟಿನಲ್ಲಿ ಆಕಾಶ್ ಚೋಪ್ರಾ ಅವರ ಈ ಹೇಳಿಕೆ ವಿರುದ್ಧ ಇದೀಗ ಆರ್ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ್ದು, ಈ ಸಲ ಕಪ್ ನಮ್ದೆ ನೋಡ್ತಾಯಿರಿ ಎಂದು ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ ಸೀಸನ್ 16 ಮಾರ್ಚ್ 31 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಆರ್ಸಿಬಿ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್‌ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.
Published On - 12:10 am, Fri, 24 March 23