Updated on: Nov 23, 2022 | 4:24 PM
ಇಂಗ್ಲೆಂಡ್ ತಂಡದ ಮಾಜಿ ನಾಯಕ, ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಜೋ ರೂಟ್ ಇಂಡಿಯನ್ ಪ್ರೀಮಿಯರ್ ಲೀಗ್ನತ್ತ ಮುಖ ಮಾಡಲು ನಿರ್ಧರಿಸಿದ್ದಾರೆ. ಅದು ಕೂಡ ಮಿನಿ ಹರಾಜಿನ ಮೂಲಕ ಎಂಬುದು ವಿಶೇಷ.
ಐಪಿಎಲ್ ಸೀಸನ್ 16 ಗಾಗಿ ಡಿಸೆಂಬರ್ 23 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗಾಗಿ ಈಗಾಗಲೇ ಜೋ ರೂಟ್ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವಿಶೇಷ ಎಂದರೆ ಕಳೆದ ನಾಲ್ಕು ವರ್ಷಗಳಿಂದ ಜೋ ರೂಟ್ ಐಪಿಎಲ್ನತ್ತ ಮುಖ ಮಾಡಿರಲಿಲ್ಲ. ಅಂದರೆ 2018 ರಲ್ಲಿ ಐಪಿಎಲ್ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದ ಇಂಗ್ಲೆಂಡ್ ಆಟಗಾರನನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
ಆ ಬಳಿಕ ಐಪಿಎಲ್ನಿಂದ ವಿಮುಖರಾಗಿದ್ದ ರೂಟ್ ಕಳೆದ ಸೀಸನ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್ ಸರಣಿ ಸೋತ ಹಿನ್ನೆಲೆಯಲ್ಲಿ ಟೆಸ್ಟ್ ಕ್ರಿಕೆಟ್ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲು ರೂಟ್ ಐಪಿಎಲ್ನಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದರು.
ಇದೀಗ ಮಿನಿ ಹರಾಜಿಗಾಗಿ ಜೋ ರೂಟ್ ಹೆಸರು ನೋಂದಾಯಿಸಿಕೊಂಡಿದ್ದು, ಈ ಮೂಲಕ ಮತ್ತೊಮ್ಮೆ ಐಪಿಎಲ್ ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಸದ್ಯ ಇಂಗ್ಲೆಂಡ್ ಟಿ20 ತಂಡದಿಂದ ಹೊರಗುಳಿದಿರುವ ರೂಟ್ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾಗ್ಯೂ ಇಂಗ್ಲೆಂಡ್ ಪರ 30 ಟಿ20 ಇನಿಂಗ್ಸ್ ಆಡಿರುವ ಜೋ ರೂಟ್ 5 ಅರ್ಧಶತಕದೊಂದಿಗೆ ಒಟ್ಟು 893 ರನ್ ಕಲೆಹಾಕಿದ್ದಾರೆ.
ಹಾಗೆಯೇ ತಮ್ಮ 30 ಇನಿಂಗ್ಸ್ನಲ್ಲಿ 90 ಫೋರ್ ಹಾಗೂ 16 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಹೀಗಾಗಿ 31 ವರ್ಷದ ಅನುಭವಿ ಆಟಗಾರ ಜೋ ರೂಟ್ ಅವರನ್ನು ಐಪಿಎಲ್ ಮಿನಿ ಹರಾಜಿನಲ್ಲಿ ಯಾವುದಾದರೂ ತಂಡ ಖರೀದಿಸಿದರೂ ಅಚ್ಚರಿಪಡಬೇಕಿಲ್ಲ.