
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಇದೀಗ ಪ್ಲೇಆಫ್ ಹಂತಕ್ಕೇರುವ ತಂಡಗಳಾವುವು ಎಂಬ ಲೆಕ್ಕಾಚಾರಗಳು ಶುರುವಾಗಿದೆ. ಈ ಬಾರಿ ಕೂಡ ತಂಡಗಳು ಕಣಕ್ಕಿಳಿಯುತ್ತಿದ್ದು, ಇದರಲ್ಲಿ 4 ತಂಡಗಳು ಮುಂದಿನ ಹಂತಕ್ಕೇರಲಿದೆ. ಹೀಗೆ ಅತ್ಯಧಿಕ ಪಾಯಿಂಟ್ ಪಡೆದು ಮುಂದಿನ ಹಂತಕ್ಕೇರುವ 4 ತಂಡಗಳನ್ನು ಹೆಸರಿಸಿದ್ದಾರೆ ಡಿ & ಪಿ ಅಡ್ವೈಸರಿ ಸಂಸ್ಥೆ.

ಡಿ & ಪಿ ಅಡ್ವೈಸರಿ ಎಂಬುದು ಅಂಕಿ ಅಂಶಗಳ ಮೂಲಕ ಮೌಲ್ಯಮಾಪನ ಸೇವೆ ಒದಗಿಸುವ ಸಂಸ್ಥೆಯಾಗಿದೆ. ಇದೇ ಸಂಸ್ಥೆಯ ಅಡಿಯಲ್ಲಿ ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯಮಾಪನ ಮಾಡಲಾಗುತ್ತದೆ. ಇದೀಗ ಈ ಮೌಲ್ಯಮಾಪನ ಅಂಕಿ ಅಂಶಗಳ ಮೂಲಕ ಈ ಬಾರಿ ಐಪಿಎಲ್ನಲ್ಲಿ ಪ್ಲೇ ಆಫ್ ಆಡುವ ನಾಲ್ಕು ತಂಡಗಳಾವುವು ಎಂಬುದನ್ನು ಕಂಡುಕೊಳ್ಳಲಾಗಿದೆ.

ಈ ಸಂಸ್ಥೆಯ ಅಂಕಿ ಅಂಶಗಳ ವರದಿ ಪ್ರಕಾರ, ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಆಡುವುದು ಬಹುತೇಕ ಖಚಿತ. ಶೇ.50.1 ರಷ್ಟು ಅಂಕಿ ಅಂಶಗಳು ಸಂಜು ಸ್ಯಾಮ್ಸನ್ ಪಡೆಯು ಪ್ಲೇಆಫ್ ಹಂತಕ್ಕೇರುವುದನ್ನು ಖಚಿತಪಡಿಸಿದೆ ಎಂದು ತಿಳಿಸಿದೆ.

ಇನ್ನು ಶೇ. 49.8 ರಷ್ಟು ಸಂಭಾವ್ಯತೆಯನ್ನು ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹಾಗಾಗಿ ಕೆಎಲ್ ರಾಹುಲ್ ಬಳಗ ಕೂಡ ಈ ಸಲ ಪ್ಲೇಆಫ್ ಆಡಲಿದೆ ಎಂದಿದ್ದಾರೆ D & P ಅಡ್ವೈಸರಿ ಸಂಸ್ಥೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಶೇ. 46.5 ರಷ್ಟು ಅಂಕಿ ಅಂಶಗಳು ಪೂರಕವಾಗಿದೆ. ಹೀಗಾಗಿ ಸಿಎಸ್ಕೆ ಕೂಡ ಮುಂದಿನ ಹಂತಕ್ಕೇರಲಿದೆ ಎಂದಿದ್ದಾರೆ.

ಹಾಗೆಯೇ ಶೇ.46 ರಷ್ಟು ಸಂಭಾವ್ಯತೆ ಹೊಂದಿರುವ ಮುಂಬೈ ಇಂಡಿಯನ್ಸ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಹೀಗಾಗಿ ರೋಹಿತ್ ಶರ್ಮಾ ಪಡೆಯು ಟಾಪ್-4 ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಡಿ & ಪಿ ಅಡ್ವೈಸರಿ ಕಂಪೆನಿ ತಿಳಿಸಿದೆ.

ಇನ್ನು ಆರ್ಸಿಬಿ ತಂಡವು ಈ ಬಾರಿ ಪ್ಲೇಆಫ್ ಪ್ರವೇಶಿಸುವುದು ಕಷ್ಟಕರ ಎಂದು ಅಭಿಪ್ರಾಯಪಟ್ಟಿದೆ. ಹಾಗೆಯೇ ರಿಷಭ್ ಪಂತ್ ಅಲಭ್ಯತೆಯ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಹಿನ್ನಡೆ ಅನುಭವಿಸಲಿದೆ ಎಂದು ಡಿ & ಪಿ ಅಡ್ವೈಸರಿ ಮೌಲ್ಯಮಾಪನದಿಂದ ತಿಳಿದು ಬಂದಿದೆ.

ಡಿ & ಪಿ ಅಡ್ವೈಸರಿ ಸಂಸ್ಥೆಯು ಮಾಂಟೆ ಕಾರ್ಲೊ ಸಿಮ್ಯುಲೇಶನ್ ಅನ್ನು ಬಳಸಿ ಐಪಿಎಲ್ನ ಪ್ಲೇಆಫ್ ಹಂತಕ್ಕೇರುವ ನಾಲ್ಕು ತಂಡಗಳ ಭವಿಷ್ಯ ನುಡಿದಿದೆ. ಮಾಂಟೆ ಕಾರ್ಲೊ ಸಿಮ್ಯುಲೇಶನ್ ಹಣಕಾಸು ಕ್ಷೇತ್ರದಲ್ಲಿ ಬಳಸಲಾಗುವ ಅಂಕಿಅಂಶಗಳ ತಂತ್ರವಾಗಿದೆ. ಇದನ್ನು ಕ್ರೀಡೆಯ ವ್ಯವಹಾರದಲ್ಲಿ ಮತ್ತು ಉತ್ಪನ್ನಗಳ ನ್ಯಾಯೋಚಿತ ಮೌಲ್ಯವನ್ನು ಅಂದಾಜು ಮಾಡಲು ಕೂಡ ಬಳಲಾಗುತ್ತದೆ. ಇದನ್ನೇ ಬಳಸಿ ಐಪಿಎಲ್ ಪ್ಲೇಆಫ್ ತಂಡಗಳನ್ನು ಹೆಸರಿಸಿದ್ದು, ಈ ಭವಿಷ್ಯ ನಿಜವಾಗಲಿದೆಯಾ ಎಂಬುದನ್ನು ಕಾದು ನೋಡಬೇಕಷ್ಟೇ.