Updated on: Apr 30, 2023 | 10:07 PM
IPL 2023: ಐಪಿಎಲ್ ಸೀಸನ್ 16 ರಲ್ಲಿ ಬೃಹತ್ ಮೊತ್ತ ಪೇರಿಸುವ ಮೂಲಕ ದಾಖಲೆ ಬರೆದಿರುವ ಲಕ್ನೋ ಸೂಪರ್ ಜೈಂಟ್ಸ್ ಇದೀಗ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ ಲಕ್ನೋ 5 ರಲ್ಲಿ ಜಯ ಸಾಧಿಸಿದೆ. ಈ ಐದು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಪಡೆ 3 ಬಾರಿ 200 ಕ್ಕೂ ಅಧಿಕ ರನ್ಗಳಿಸಿರುವುದು ವಿಶೇಷ.
ಆದರೆ ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಲಕ್ನೋ ಸೂಪರ್ ಜೈಂಟ್ಸ್ ಯಾವಾಗೆಲ್ಲಾ ಬೃಹತ್ ಮೊತ್ತ ಕಲೆಹಾಕಿದೆಯೋ, ಆ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಪವರ್ಪ್ಲೇನಲ್ಲೇ ಔಟಾಗಿದ್ದಾರೆ. ಅಂದರೆ ಕೆಎಲ್ ರಾಹುಲ್ ಬೇಗನೆ ಔಟಾದ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವುದು ವಿಶೇಷ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ದಾಖಲೆಯ 257 ರನ್ ಕಲೆಹಾಕಿತ್ತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 9 ಎಸೆತಗಳಲ್ಲಿ 12 ರನ್ಗಳಿಸಿ ಔಟಾಗಿದ್ದರು.
ಇನ್ನು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ 20 ಎಸೆತಗಳಲ್ಲಿ 18 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 213 ರನ್ಗಳನ್ನು ಚೇಸ್ ಮಾಡಿ ಜಯ ಸಾಧಿಸಿತ್ತು.
ಹಾಗೆಯೇ ಸಿಎಸ್ಕೆ ವಿರುದ್ಧ ರಾಹುಲ್ 18 ಎಸೆತಗಳಲ್ಲಿ 20 ರನ್ಗಳಿಸಿದರೂ, ಲಕ್ನೋ ಸೂಪರ್ ಜೈಂಟ್ಸ್ 205 ರನ್ ಪೇರಿಸಿತ್ತು. ಇದಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 193 ರನ್ ಬಾರಿಸಿದಾಗ, ಕೆಎಲ್ ರಾಹುಲ್ 12 ಎಸೆತಗಳಲ್ಲಿ 8 ರನ್ಗಳಿಸಿ ಔಟಾಗಿದ್ದರು.
ಅಂದರೆ ಕೆಎಲ್ ರಾಹುಲ್ ಬೇಗನೆ ಔಟಾದ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟರ್ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಪವರ್ಪ್ಲೇನಲ್ಲಿ ಪವರ್ಫುಲ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮತ್ತೊಂದೆಡೆ ರಾಹುಲ್ ಉತ್ತಮ ಪ್ರದರ್ಶನ ನೀಡಿದ ಪಂದ್ಯಗಳಲ್ಲಿ ಲಕ್ನೋ ತಂಡದ ಸ್ಕೋರ್ ಈ ಕೆಳಗಿನಂತಿದೆ...
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ 56 ಎಸೆತಗಳಲ್ಲಿ 74 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಲೆಹಾಕಿರುವುದು 159 ರನ್ ಮಾತ್ರ. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಹುಲ್ 32 ಎಸೆತಗಳಲ್ಲಿ 39 ರನ್ ಬಾರಿಸಿದಾಗ ಲಕ್ನೋ 154 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಹಾಗೆಯೇ ಗುಜರಾತ್ ಟೈಟಾನ್ಸ್ ವಿರುದ್ಧ ಕೆಎಲ್ ರಾಹುಲ್ 61 ಎಸೆತಗಳಲ್ಲಿ 68 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 128 ರನ್ಗಳಿಸಿ ಸೋಲನುಭವಿಸಿತ್ತು. ಇದಲ್ಲದೆ ಸನ್ರೈಸರ್ಸ್ ಹೈದರಾಬಾದ್ 127 ರನ್ ಬಾರಿಸಿದಾಗ ಕೆಎಲ್ಆರ್ 31 ಎಸೆತಗಳಲ್ಲಿ ಕೆಎಲ್ಆರ್ 35 ರನ್ ಕಲೆಹಾಕಿದ್ದರು.
ಅಂದರೆ ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೆಎಲ್ ರಾಹುಲ್ 20 ಎಸೆತಕ್ಕಿಂತ ಕಡಿಮೆ ಬಾಲ್ಗಳನ್ನು ಎದುರಿಸಿ ಬೇಗನೆ ಔಟಾದರೆ ಬೃಹತ್ ಮೊತ್ತ ಪೇರಿಸುತ್ತಿರುವುದು ಸ್ಪಷ್ಟ. ಅದರಲ್ಲೂ ಪವರ್ಪ್ಲೇನಲ್ಲಿ ರಾಹುಲ್ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿರುವುದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟಿಂಗ್ ಮೇಲೆ ಪ್ರಭಾವ ಬೀರುತ್ತಿದೆ.
ಅಲ್ಲದೆ ಕೆಎಲ್ಆರ್ ಅವರ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಕೆಲ ಪಂದ್ಯಗಳನ್ನು ಕೂಡ ಕಳೆದುಕೊಂಡಿದೆ. ಇದೇ ಕಾರಣದಿಂದಾಗಿ ಕೆಎಲ್ ರಾಹುಲ್ ಅವರ ಬೇಗನೆ ಔಟ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಬೃಹತ್ ಮೊತ್ತದ ಅಂಕಿ ಅಂಶಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.