Updated on: Apr 19, 2023 | 5:30 PM
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಭರದಿಂದ ಸಾಗುತ್ತಿದೆ. ಈ ಬಾರಿ ಬಹುತೇಕ ತಂಡಗಳಿಂದ ಉತ್ತಮ ಪೈಪೋಟಿ ಕಂಡು ಬರುತ್ತಿದೆ. ಈಗಾಗಲೇ ಎಲ್ಲಾ ತಂಡಗಳ 5 ಪಂದ್ಯಗಳು ಮುಗಿದಿದ್ದು, ಇದಾಗ್ಯೂ ಯಾವುದೇ ತಂಡ ಸೌರ್ವಭೌಮತ್ವ ಸಾಧಿಸಿಲ್ಲ. ಅಂದರೆ ಎಲ್ಲಾ ತಂಡಗಳು ಸೋಲು-ಗೆಲುವುಗಳನ್ನು ಕಾಣುತ್ತಿದೆ. ಹೀಗಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ.
ಪ್ರಸ್ತುತ ಪಾಯಿಂಟ್ಸ್ ಟೇಬಲ್ (ಏ.19) ನಲ್ಲಿ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ದ್ವಿತೀಯ ಸ್ಥಾನ ಅಲಂಕರಿಸಿದೆ. ಇನ್ನು ಮೂರನೇ ಸ್ಥಾನದಲ್ಲಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡ. ಇಲ್ಲಿ 2ನೇ ಹಾಗೂ 3ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೇ.4 ರಂದು ಮುಖಾಮುಖಿಯಾಗಬೇಕಿತ್ತು.
ಆದರೀಗ ಈ ಪಂದ್ಯವನ್ನು ಮೇ 3 ರಂದು ನಡೆಸಲು ತೀರ್ಮಾನಿಸಲಾಗಿದೆ. ಮೇ. 4 ರಂದು ಲಕ್ನೋ ಮಹಾನಗರದ ಪಾಲಿಕೆ ಚುನಾವಣೆ ನಡೆಯಲಿದ್ದು, ಹೀಗಾಗಿ ಅಂದು ರಾತ್ರಿ ನಡೆಯಬೇಕಿದ್ದ ಪಂದ್ಯವನ್ನು ಮೇ 3 ರಂದು ನಡೆಸಲು ನಿರ್ಧರಿಸಲಾಗಿದೆ. ಅದರಂತೆ ಮೇ 3ರಂದು ಲಕ್ನೋದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 3.30ಕ್ಕೆ ಸಿಎಸ್ಕೆ-ಎಲ್ಎಸ್ಜಿ ಪಂದ್ಯ ನಡೆಯಲಿದೆ.
ಇನ್ನು ಉಭಯ ತಂಡಗಳೂ ಬಲಿಷ್ಠವಾಗಿರುವ ಕಾರಣ ಈ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಏಕೆಂದರೆ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿದೆ.
ಮತ್ತೊಂದೆಡೆ ಎಂಎಸ್ ಧೋನಿ ಸಾರಥ್ಯದ ಸಿಎಸ್ಕೆ ತಂಡ ಕೂಡ 5 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಸೋತು, ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದಾಗ್ಯೂ ನೆಟ್ ರನ್ ರೇಟ್ನಲ್ಲಿ ಮುಂಚೂಣಿಯಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನ ಅಲಂಕರಿಸಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಗೆದ್ದರೆ ಸಿಎಸ್ಕೆ ಅಂಕ ಪಟ್ಟಿಯಲ್ಲಿ ಮೇಲೇರಬಹುದು.