IPL 2023 Final: ಅಹಮದಾಬಾದ್ನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದಾನೆ. 7.30 ಕ್ಕೆ ಶುರವಾಗಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವು ಮಳೆಯ ಕಾರಣ ವಿಳಂಬವಾಗಿದೆ.
ಸದ್ಯ ಅಹಮದಾಬಾದ್ನಲ್ಲಿ ಸತತ ಮಳೆಯಾಗುತ್ತಿದ್ದು, ಹೀಗಾಗಿ ಪಂದ್ಯ ಹೇಗೆ ನಡೆಯಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಂದು ವೇಳೆ ಮಳೆ ನಿಂತರೆ, ಐಪಿಎಲ್ ರೈನ್ ರೂಲ್ಸ್ ಪ್ರಕಾರ ಪಂದ್ಯ ನಡೆಯಲಿದೆ. ಅಂದರೆ ಮಳೆ ಬಂದರೆ ಪಂದ್ಯವನ್ನು ಆಯೋಜಿಸಲು ಕೆಲ ನಿಯಮಗಳನ್ನು ರೂಪಿಸಲಾಗಿದೆ.
ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಯಾವೆಲ್ಲಾ ನಿಯಮಗಳ ಪ್ರಕಾರ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
- ಟಾಸ್ ಪ್ರಕ್ರಿಯೆಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ಆರಂಭವಾದರೂ ಓವರ್ಗಳನ್ನು ಕಡಿತಗೊಳಿಸುವುದಿಲ್ಲ. ಅಂದರೆ ಪಂದ್ಯವು ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್ಗಳನ್ನು ಆಡಲಿದೆ. (ಒಂದು ವೇಳೆ ಮತ್ತೆ ಅಡಚಣೆ ಉಂಟಾಗಲಿದೆ ಎಂಬ ಸೂಚನೆಯಿದ್ದರೆ ಮಾತ್ರ ಓವರ್ಗಳ ಕಡಿತಕ್ಕೆ ಮುಂದಾಗಬಹುದು)
- ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್ಗಳನ್ನು ಆಡಿರಬೇಕು.
- ಇನ್ನು ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್ಗಳ ಪಂದ್ಯವನ್ನು ಆಯೋಜಿಸಲಿದೆ. ಈ 5 ಓವರ್ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ.
- ಇನ್ನು 11.56 ರಿಂದ 12.50 ರೊಳಗೆ 5 ಓವರ್ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್ ನಡೆಸುವ ಸಾಧ್ಯತೆಯಿದೆ.
IPL 2022 ರಲ್ಲಿ ಫೈನಲ್ ಪಂದ್ಯಕ್ಕಾಗಿ ಮೀಸಲು ದಿನವನ್ನು ಘೋಷಿಸಲಾಗಿತ್ತು. ಅದರಂತೆ ಈ ಬಾರಿ ಕೂಡ ನಿಗದಿತ ಸಮಯದೊಳಗೆ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಸೋಮವಾರ ಪಂದ್ಯವನ್ನು ಆಯೋಜಿಸಲಿದೆ ಎಂದು ಗುಜರಾತ್ ಟೈಟಾನ್ಸ್ ತಿಳಿಸಿದೆ.
- ಒಂದು ವೇಳೆ ಮಳೆಯಿಂದಾಗಿ ಸೋಮವಾರ ಕೂಡ ಕನಿಷ್ಠ ಸೂಪರ್ ಓವರ್ ಪಂದ್ಯ ನಡೆಯದಿದ್ದರೆ, ಲೀಗ್ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ. ಎಂದು ವರದಿಯಾಗಿದೆ.
Published On - 8:29 pm, Sat, 27 May 23