IPL 2023: ನೋವಿನ ನಡುವೆಯೂ RCB ನಾಯಕನ ಕೆಚ್ಚೆದೆಯ ಹೋರಾಟ..!
TV9 Web | Updated By: ಝಾಹಿರ್ ಯೂಸುಫ್
Updated on:
Apr 18, 2023 | 3:23 PM
IPL 2023 Kannada: 3ನೇ ವಿಕೆಟ್ಗೆ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್ವೆಲ್ 126 ರನ್ಗಳ ಜೊತೆಯಾಟವಾಡಿದರು. ಈ ವೇಳೆ ಕೇವಲ 36 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 3 ಫೋರ್ನೊಂದಿಗೆ ಮ್ಯಾಕ್ಸಿ 76 ರನ್ ಬಾರಿಸಿ ಔಟಾದರು.
1 / 9
IPL 2023 RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಆರ್ಸಿಬಿ-ಸಿಎಸ್ಕೆ ನಡುವಣ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಯಿತು. ಸೋಮವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಆರ್ಸಿಬಿ ಬೌಲರ್ಗಳು ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸಿದ್ದರು.
2 / 9
ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿದರೆ, ಆರ್ಸಿಬಿ ತಂಡದ ಬೌಲರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅತ್ತ ಸಿಎಸ್ಕೆ ಪರ ಆರಂಭಿಕ ಆಟಗಾರ ಡೆವೊನ್ ಕಾನ್ವೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
3 / 9
ಆರಂಭದಿಂದಲೇ ಅಬ್ಬರಿಸಿದ ಕಾನ್ವೆ 45 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 83 ರನ್ ಬಾರಿಸಿದರು. ಇನ್ನು ಶಿವಂ ದುಬೆ 27 ಎಸೆತಗಳಲ್ಲಿ 5 ಸಿಕ್ಸ್, 2 ಫೋರ್ನೊಂದಿಗೆ 52 ರನ್ ಬಾರಿಸಿದರು. ಹಾಗೆಯೇ ಅಜಿಂಕ್ಯ ರಹಾನೆ ಕೂಡ 2 ಸಿಕ್ಸ್ನೊಂದಿಗೆ 37 ರನ್ ಚಚ್ಚಿದರು. ಪರಿಣಾಮ ಸಿಎಸ್ಕೆ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತು.
4 / 9
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. 6 ರನ್ಗಳಿಸಿ ವಿರಾಟ್ ಕೊಹ್ಲಿ ಔಟಾದರೆ, ಮಹಿಪಾಲ್ ಲೋಮ್ರರ್ ಶೂನ್ಯ ಸುತ್ತಿ ಹೊರನಡೆದರು. ಇದಾಗ್ಯೂ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಹೋರಾಟ ಮುಂದುವರೆಸಿದ್ದರು.
5 / 9
3ನೇ ವಿಕೆಟ್ಗೆ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್ವೆಲ್ 126 ರನ್ಗಳ ಜೊತೆಯಾಟವಾಡಿದರು. ಈ ವೇಳೆ ಕೇವಲ 36 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 3 ಫೋರ್ನೊಂದಿಗೆ ಮ್ಯಾಕ್ಸಿ 76 ರನ್ ಬಾರಿಸಿ ಔಟಾದರು.
6 / 9
ಮತ್ತೊಂದೆಡೆ ಫಾಫ್ ಡುಪ್ಲೆಸಿಸ್ 4 ಸಿಕ್ಸ್ ಹಾಗೂ 5 ಫೋರ್ನೊಂದಿಗೆ ಕೇವಲ 33 ಎಸೆತಗಳಲ್ಲಿ 62 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವಿಕೆಟ್ ಕೈಚೆಲ್ಲುವ ಮುನ್ನ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಮಾಡಲು ಪ್ರಯಾಸಪಡುವುದು ಕೂಡ ಕಂಡು ಬಂತು. ಅಲ್ಲದೆ ಫಿಸಿಯೋ ಅವರನ್ನು ಮೈದಾನಕ್ಕೆ ಕರೆಸಿ ಹೊಟ್ಟೆಗೆ ಕಟ್ಟಿರುವ ಬ್ಯಾಂಡೇಜ್ ಅನ್ನು ಮತ್ತಷ್ಟು ಬಿಗಿಗೊಳಿಸಿದ್ದರು.
7 / 9
ಅಂದರೆ ಆರ್ಸಿಬಿ ನಾಯಕ ಸಂಪೂರ್ಣ ಫಿಟ್ ಆಗಿಲ್ಲದಿದ್ದರೂ ತಂಡದ ಗೆಲುವಿಗಾಗಿ ಬ್ಯಾಂಡೇಜ್ ಕಟ್ಟಿ ಮೈದಾನಕ್ಕಿಳಿದಿದ್ದರು. ಸಿಎಸ್ಕೆ ಬ್ಯಾಟಿಂಗ್ ವೇಳೆ ಡೈವ್ ಹೊಡೆದು ಫೀಲ್ಡಿಂಗ್ ಮಾಡಿದಾಗ ಡುಪ್ಲೆಸಿಸ್ ಅವರ ಪಕ್ಕೆಲುಬಿನ ಭಾಗಕ್ಕೆ ಏಟಾಗಿದೆ. ಇದರಿಂದ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು.
8 / 9
ಆ ಬಳಿಕ ನೋವಿರುವ ಭಾಗಕ್ಕೆ ಬ್ಯಾಂಡೇಜ್ ಅನ್ನು ಬಿಗಿಗೊಳಿಸಿ ಡುಪ್ಲೆಸಿಸ್ ಮೈದಾನಕ್ಕಿಳಿದಿದ್ದರು. ಅಲ್ಲದೆ ಭರ್ಜರಿ ಬ್ಯಾಟಿಂಗ್ ನಡೆಸಿ ಆರ್ಸಿಬಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಡುಪ್ಲೆಸಿಸ್ ವಿಕೆಟ್ ಒಪ್ಪಿಸುವಾಗ ಆರ್ಸಿಬಿ ತಂಡಕ್ಕೆ 6 ಓವರ್ಗಳಲ್ಲಿ 68 ರನ್ಗಳ ಅವಶ್ಯಕತೆಯಿತ್ತು.
9 / 9
ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದೊಂದಿಗೆ ಆರ್ಸಿಬಿ ತಂಡವು 8 ರನ್ಗಳಿಂದ ಸೋಲೊಪ್ಪಿಕೊಂಡಿತು. ಇತ್ತ ನೋವಿನ ನಡುವೆಯೂ ಅತ್ಯಧ್ಭುತ ಪ್ರದರ್ಶನ ನೀಡಿದ ಫಾಫ್ ಡುಪ್ಲೆಸಿಸ್ ಅವರ ಹೋರಾಟ ವ್ಯರ್ಥವಾಯಿತು. ಇದಾಗ್ಯೂ ಆರ್ಸಿಬಿ ನಾಯಕ ಈ ಕಿಚ್ಚಿನ ಹೋರಾಟಕ್ಕೆ ಅಭಿಮಾನಿಗಳು ಬಹುಪರಾಕ್ ಅಂದಿದ್ದಾರೆ.