- Kannada News Photo gallery Cricket photos Virat Kohli has fined 10 percent of his match fees for breaching IPL Code of Conduct during RCB vs CSK IPL 2023
Virat Kohli: ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯಿಂದ ನಡೆಯಿತು ಬಹುದೊಡ್ಡ ತಪ್ಪು: ಬಿಸಿಸಿಐಯಿಂದ ಬಂತು ಪತ್ರ
RCB vs CSK IPL 2023: ಆರ್ಸಿಬಿ ಹಾಗೂ ಸಿಎಸ್ಕೆ ನಡುವಣ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಿರಾಟ್ ಕೊಹ್ಲಿ ಅವರಿಗೆ ಪಂದ್ಯದ ಶುಲ್ಕದ ಶೇ. 10 ರಷ್ಟು ದಂಡ ವಿಧಿಸಲಾಗಿದೆ.
Updated on:Apr 18, 2023 | 11:10 AM

ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ಎಂದರೆ ಅದು ರಣರೋಚಕವಾಗಿರುತ್ತದೆ. ಹಿಂದಿನ ಎಲ್ಲ ಸೀಸನ್ಗಳಲ್ಲಿ ಇದು ನಡೆದುಕೊಂಡು ಬಂದಿದೆ. ಈ ಬಾರಿ ಕೂಡ ಆರ್ಸಿಬಿ-ಸಿಎಸ್ಕೆ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.

ಬೆಂಗಳೂರು-ಚೆನ್ನೈ ನಡುವಣ ಕಾದಾಟ ಎಂದರೆ ಆಟಗಾರರು ಕೂಡ ಹೆಚ್ಚಿನ ಎನರ್ಜಿಯಲ್ಲಿ ಇರುತ್ತಾರೆ. ಮುಖ್ಯವಾಗಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ. ಮೈದಾನದಲ್ಲಿ ಸದಾ ಅಗ್ರೆಸಿವ್ ಆಗಿರುವ ಕೊಹ್ಲಿ ಸೋಮವಾರದ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಕೊಂಚ ಹೆಚ್ಚೇ ಅಗ್ರೆಸಿವ್ ಆಗಿದ್ದರು. ಇದಕ್ಕೀಗ ಬೆಲೆ ತೆತ್ತಬೇಕಾಗಿ ಬಂದಿದೆ.

ಬ್ಯಾಟಿಂಗ್ನಲ್ಲಿ ಕೇವಲ 6 ರನ್ ಗಳಿಸಿ ಔಟಾಗುವ ಮೂಲಕ ಸದ್ದು ಮಾಡದ ಕೊಹ್ಲಿ ಫೀಲ್ಡಿಂಗ್ನಲ್ಲಿ ಮಾತ್ರ ಆಕ್ರೋಶದಿಂದಿದ್ದರು. ಅದರಲ್ಲೂ ಆರ್ಸಿಬಿಗೆ ಕಂಟಕವಾಗಿದ್ದ ಸಿಎಸ್ಕೆ ಬ್ಯಾಟರ್ ಶಿವಂ ದುಬೆ ಅವರ ವಿಕೆಟ್ ಬಿದ್ದಾಗ ಕೊಹ್ಲಿಯ ಸಂಭ್ರಮಾಚರಣೆ ಅತಿರೇಕಕ್ಕೆ ಹೋಗಿದೆ. ಹೀಗಾಗಿ ಅವರಿಗೆ ಇದೀಗ ಬಿಸಿಸಿಐ ಪತ್ರ ಕಳುಹಿಸಿದ್ದು ದಂಡ ವಿಧಿಸಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೊಹ್ಲಿ ಅವರಿಗೆ ಪಂದ್ಯದ ಶುಲ್ಕದ ಶೇ. 10 ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ನ ನೀತಿ ಸಂಹಿತೆಯ 2.2 ಅಡಿಯಲ್ಲಿ ಮೊದಲನೇ ಹಂತದ ಅಪರಾಧವನ್ನು ಮಾಡಿರುವುದಾಗಿ ಕೊಹ್ಲಿ ಕೂಡ ಒಪ್ಪಿಕೊಂಡಿದ್ದಾರೆ.

ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಮಳೆ ಸುರಿಸುತ್ತಿದ್ದ ಶಿವಂ ದುಬೆ 26 ಎಸೆತಗಳಲ್ಲಿ ಎರಡು ಫೋರ್, 5 ಸಿಕ್ಸರ್ ಸಿಡಿಸಿ 52 ರನ್ ಗಳಿಸಿದರು. ವೇಯ್ನ್ ಪಾರ್ನೆಲ್ ಅವರ ಬೌಲಿಂಗ್ ದಾಳಿಯಲ್ಲಿ ಮೊಹಮ್ಮದ್ ಸಿರಾಜ್ ಅವರಿಗೆ ಕ್ಯಾಚ್ ನೀಡಿ ಔಟಾದರು. ಈ ಸಂದರ್ಭ ಕೊಹ್ಲಿ ಕೋಪದಿಂದ ಸಂಭ್ರಮಾಚರಣೆ ಮಾಡಿದ್ದಾರೆ.

ಆರ್ಸಿಬಿ ಈ ಪಂದ್ಯದಲ್ಲಿ 8 ರನ್ಗಳಿಂದ ಸೋಲು ಕಂಡಿತು. ಚೆನ್ನೈ ನೀಡಿದ್ದ 227 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ಆರಂಭದಲ್ಲೇ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಮ್ಯಾಕ್ಸ್ವೆಲ್ (76) ಹಾಗೂ ಡುಪ್ಲೆಸಿಸ್ (62) ಸ್ಫೋಟಕ ಬ್ಯಾಟಿಂಗ್ ನಡೆಸಿ ಗೆಲುವಿನ ಆಸೆ ಚಿಗುರಿಸಿದ್ದರು.

ಅಂತಿಮ ಹಂತದಲ್ಲಿ ಆರ್ಸಿಬಿ ಪರ ಫಿನಿಶರ್ ಜವಾಬ್ದಾರಿ ಯಾರೂ ಹೊರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿ ಸೋಲು ಕಂಡಿತು. ಸಿಎಸ್ಕೆ ಪರ ತುಶಾರ್ ದೇಶ್ಪಾಂಡೆ 3 ಹಾಗೂ ಮಹೀಶಾ ತೀಕ್ಷಾಣ 2 ವಿಕೆಟ್ ಕಿತ್ತು ಮಿಂಚಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಡೆವೋನ್ ಕಾನ್ವೆ ಅವರ 82 ರನ್, ಶಿವಂ ದುಬೆ ಅವರ 52 ಹಾಗೂ ಅಜಿಂಕ್ಯಾ ರಹಾನೆ ಅವರ 37 ರನ್ಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತ್ತು. ಆರ್ಸಿಬಿ ಪರ ಸಿರಾಜ್, ಪಾರ್ನೆಲ್, ವಿಜಯ್ಕುಮಾರ್, ಮ್ಯಾಕ್ಸ್ವೆಲ್, ಹಸರಂಗ ಹಾಗೂ ಹರ್ಷಲ್ 1 ವಿಕೆಟ್ ಪಡೆದರು.
Published On - 11:10 am, Tue, 18 April 23
