Updated on: Apr 25, 2023 | 1:48 PM
IPL 2023: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಗೆಲುವಿನ ಖುಷಿಯ ತೇಲುತ್ತಿದ್ದ ಆರ್ಸಿಬಿ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಆರ್ಆರ್ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್ ರೇಟ್ಗಾಗಿ ಆರ್ಸಿಬಿ ತಂಡಕ್ಕೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.
ಇಲ್ಲಿ ನಿಧಾನಗತಿಯ ಓವರ್ ರೇಟ್ಗಾಗಿ ಆರ್ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿಗೆ 24 ಲಕ್ಷ ರೂ. ದಂಡ ವಿಧಿಸಿದರೆ, ಪ್ಲೇಯಿಂಗ್ ಇಲೆವೆನ್ನ ಭಾಗವಾಗಿದ್ದ ಉಳಿದ ಆಟಗಾರರಿಗೆ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ.
ಆರ್ಸಿಬಿ ತಂಡದ ನಾಯಕ 2ನೇ ಬಾರಿ ನಿಧಾನಗತಿಯಲ್ಲಿ ಓವರ್ ಮುಗಿಸಿದ್ದು, ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ದಂಡ ವಿಧಿಸಲಾಗಿದೆ. ಏತನ್ಮಧ್ಯೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರ್ಗಳನ್ನು ಮುಗಿಸಿದ್ದ ಪರಿಣಾಮ ಫಾಫ್ ಡುಪ್ಲೆಸಿಸ್ಗೆ 12 ಲಕ್ಷ ದಂಡ ವಿಧಿಸಲಾಗಿತ್ತು. ಇದೀಗ ಆರ್ಸಿಬಿ 2ನೇ ಬಾರಿ ತಪ್ಪನ್ನು ಪುನರಾವರ್ತಿಸಿದೆ.
ಒಂದು ವೇಳೆ ಆರ್ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮುಂದಿನ ಪಂದ್ಯದಲ್ಲೂ ಇದೇ ತಪ್ಪನ್ನು ಮಾಡಿದರೆ, ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಲಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಿಗದಿತ ಸಮಯದಲ್ಲಿ 20 ಓವರ್ಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
ಐಸಿಸಿ ನಿಯಮದ ಪ್ರಕಾರ ಟಿ20 ಕ್ರಿಕೆಟ್ನಲ್ಲಿ 20 ಓವರ್ಗಳನ್ನು 1 ಗಂಟೆ 25 ನಿಮಿಷದೊಳಗೆ ಪೂರ್ಣಗೊಳಿಸಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಉಳಿದ ಓವರ್ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್ನಿಂದ ಒಬ್ಬ ಆಟಗಾರನನ್ನು 30 ಯಾರ್ಡ್ ಸರ್ಕಲ್ನಲ್ಲಿ ನಿಲ್ಲಿಸಬೇಕಾಗುತ್ತದೆ.
ಇನ್ನು ಸ್ಲೋ ಓವರ್ ರೇಟ್ ನಿಯಮದ ಅಡಿಯಲ್ಲಿ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿಸಲಾಗುತ್ತದೆ. ಅದರಂತೆ ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದು ಪುನರಾವರ್ತನೆಯಾದರೆ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ಪಾವತಿಸಬೇಕು.
ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ನಿಗದಿತ ಸಮಯದೊಳಗೆ ಓವರ್ಗಳನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರಿಗೆ 24 ಲಕ್ಷ ರೂ. ಹಾಗೂ ಉಳಿದ ಆಟಗಾರರಿಗೆ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ 25 ರಷ್ಟು ದಂಡ ವಿಧಿಸಿದೆ.
ಅಲ್ಲದೆ ಆರ್ಸಿಬಿ ನಾಯಕನಿಗೆ ಕೊನೆಯ ಎಚ್ಚರಿಕೆಯನ್ನು ಕೂಡ ನೀಡಲಾಗಿದ್ದು, ಈ ತಪ್ಪು ಮುಂದಿನ ಪಂದ್ಯಗಳಲ್ಲಿ ಪುನರಾವರ್ತನೆಯಾದರೆ ತಂಡದ ನಾಯಕ ಒಂದು ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.
Published On - 11:16 pm, Mon, 24 April 23